ಗಾಜಾ:ಕಳೆದ ವರ್ಷದಅಕ್ಟೋಬರ್ 7 ರಿಂದ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧ ಗಾಜಾ ಪಟ್ಟಿಯಲ್ಲಿ ಭೀಕರತೆ ಸೃಷ್ಟಿಸಿದೆ. ಇಸ್ರೇಲ್ ಸೇನಾಪಡೆಯ ದಾಳಿಗೆ ಈವರೆಗೂ 9600 ಮಕ್ಕಳು ಸೇರಿದಂತೆ 23 ಸಾವಿರ ಜನರು ಸಾವಿಗೀಡಾಗಿದ್ದಾರೆ. 59 ಸಾವಿರ ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಮೂಲದ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಇಸ್ರೇಲಿ ಸೇನೆಯ ದಾಳಿಗೆ 249 ಪ್ಯಾಲೆಸ್ಟೈನಿಯನ್ನರು ಬಲಿಯಾಗಿದ್ದಾರೆ. 510 ಮಂದಿ ಗಾಯಗೊಂಡಿದ್ದಾರೆ. 94 ದಿನಗಳ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಒಟ್ಟು ಸಾವಿನ ಸಂಖ್ಯೆ 23,084 ಕ್ಕೆ ಏರಿದ್ದರೆ, 58,926 ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ, ಮೂಲಸೌಕರ್ಯಗಳ ಕೊರತೆ ಅಲ್ಲಿನ ಜನರನ್ನು ತೀವ್ರವಾಗಿ ಕಾಡುತ್ತಿದೆ.
ಹಿಜ್ಬುಲ್ಲಾ ಕಮಾಂಡರ್ ಹತ್ಯೆ:ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ದಕ್ಷಿಣ ಲೆಬನಾನ್‌ನ ಹಿಜ್ಬುಲ್ಲಾ ಕಮಾಂಡರ್ ಹತ್ಯೆಯಾಗಿದ್ದಾನೆ. ಇದು ಇನ್ನೊಂದು ಯುದ್ಧಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ. ಇಸ್ರೇಲ್ ಮತ್ತು ಲೆಬನಾನ್ ಗಡಿಯಲ್ಲಿ ನಡೆಯುತ್ತಿರುವ ಅಪ್ರಚೋದಿತ ದಾಳಿಗಳು ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದು ಅಂದಾಜಿಸಲಾಗಿದೆ.
ವಿಸ್ಸಾಮ್ ಅಲ್ ತಾವಿಲ್ ಹತ್ಯೆಗೀಡಾದ ಹಿಜ್ಬುಲ್ಲಾ ಕಮಾಂಡರ್. ಗಡಿಯಲ್ಲಿ ಕರ್ತವ್ಯ ನಿರ್ವಹಣೆಯ ವೇಳೆ ಇಸ್ರೇಲ್ ಸೇನಾ ದಾಳಿಯಲ್ಲಿ ಅಸುನೀಗಿದ್ದಾನೆ ಎಂದು ಹಿಜ್ಬಲ್ಲಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.