ಕರಾಚಿ(ಪಾಕಿಸ್ತಾನ):ಪಾಕಿಸ್ತಾನದಲ್ಲಿ 14 ವರ್ಷದ ಹಿಂದು ಬಾಲಕಿಯ ನಾಪತ್ತೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ನೀಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಇದಲ್ಲದೇ, ಇನ್ನಿಬ್ಬರು ಹಿಂದು ಮಹಿಳೆಯರ ಪತ್ತೆಗೂ ಸೂಚಿಸಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್ ನಿವಾಸಿಯಾಗಿರುವ 14 ವರ್ಷದ ಬಾಲಕಿಯನ್ನು ವಾರದ ಹಿಂದೆ ಅಪಹರಿಸಲಾಗಿದೆ. ಈ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಅಲ್ಲಿನ ಆಡಳಿತ ಬಾಲಕಿಯ ಶೀಘ್ರ ಪತ್ತೆಗಾಗಿ ಉನ್ನತ ಮಟ್ಟದ ತನಿಖೆ ನಡೆಸಲು ಸೂಚಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದು, ಸಂತ್ರಸ್ತ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಿಂಧ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಇದಲ್ಲದೇ, ಇನ್ನಿಬ್ಬರು ಹಿಂದು ಮಹಿಳೆಯರ ನಾಪತ್ತೆ ಪ್ರಕರಣದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.