ಇಸ್ಲಾಮಾಬಾದ್ (ಪಾಕಿಸ್ತಾನ):ಪಾಕಿಸ್ತಾನದ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಹಬ್ಬವಾದ ಹೋಳಿ ಆಚರಣೆಯಿಂದ ದೂರ ಇರುವಂತೆ ಅಲ್ಲಿನ ಉನ್ನತ ಶಿಕ್ಷಣ ಆಯೋಗ ಸೂಚಿಸಿದೆ. ಹೋಳಿಯಂತಹ ಆಚರಣೆಗಳು ದೇಶದ ಇಸ್ಲಾಮಿಕ್ ಗುರುತಿಗೆ (ಐಡೆಂಟಿಟಿ) ಕುಂದು ತರಲಿದ್ದು, ಇಂತಹ ಎಲ್ಲ ಚಟುವಟಿಕೆಗಳಿಂದ ವಿವೇಚನೆಯಿಂದ ದೂರವಿರಲು ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿದೆ.
ಇಸ್ಲಾಮಾಬಾದ್‌ನ ಕ್ವೈದ್-ಎ-ಅಜಮ್ ವಿಶ್ವವಿದ್ಯಾಲಯವು ಮಾರ್ಚ್ 8ರಂದು ಹೋಳಿ ಕಾರ್ಯಕ್ರಮ ಆಯೋಜಿಸಿತ್ತು. ಇದರ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ, ಉನ್ನತ ಶಿಕ್ಷಣ ಆಯೋಗದ (ಹೆಚ್‌ಇಸಿ) ಕಾರ್ಯ ನಿರ್ವಾಹಕ ನಿರ್ದೇಶಕಿ ಶೈಸ್ತಾ ಸೊಹೈಲ್ ಹೋಳಿ ಆಚರಣೆಯಿಂದ ದೂರ ಇರುವಂತೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಬರೆದಿದ್ದಾರೆ.
ಹೋಳಿಯಂತಹ ಆಚರಣೆಗಳು ದೇಶದ ಪ್ರತಿಷ್ಠೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ದುರದೃಷ್ಟವಶಾತ್ ನಮ್ಮ ಸಾಮಾಜಿಕ - ಸಾಂಸ್ಕೃತಿಕ ಮೌಲ್ಯಗಳಿಂದ ಸಂಪೂರ್ಣ ಸಂಪರ್ಕ ಕಡಿತವಾಗುತ್ತಿದೆ. ದೇಶದ ಇಸ್ಲಾಮಿಕ್ ಗುರುತಿನ ಸವೆತವನ್ನು ಬಿಂಬಿಸುವ ಚಟುವಟಿಕೆಗಳಿಗೆ ಸಾಕ್ಷಿಯಾಗುವುದು ದುಃಖಕರವಾಗಿದೆ. ಹಿಂದೂ ಹಬ್ಬವಾದ ಹೋಳಿಯನ್ನು ಗುರುತಿಸುವಲ್ಲಿ ತೋರಿದ ಉತ್ಸಾಹವು ಕಳವಳವನ್ನು ಉಂಟುಮಾಡುವ ಒಂದು ಉದಾಹರಣೆಯಾಗಿದೆ. ವಿಶ್ವವಿದ್ಯಾಲಯದ ವೇದಿಕೆಯಿಂದ ವ್ಯಾಪಕವಾಗಿ ವರದಿಯಾದ ಹಾಗೂ ಪ್ರಕಟಿತವಾದ ಈ ಘಟನೆಯು ಕಳವಳವನ್ನು ಉಂಟುಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.