ಇಸ್ಲಾಮಾಬಾದ್: ತೋಷಖಾನಾ ಗಿಫ್ಟ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಚುನಾವಣೆ ಆಯೋಗವು (Pakistan Election Commission) ಅವರನ್ನು ಅನರ್ಹಗೊಳಿಸುವ ಜತೆಗೆ ಅವರ ವಿರುದ್ಧ ಕಾನೂನು ಕ್ರಮಕ್ಕೂ ಶಿಫಾರಸು ಮಾಡಿದೆ.
ವಿದೇಶಿ ನಾಯಕರು ಅಥವಾ ಶ್ರೀಮಂತ ಅರಬ್ ರಾಷ್ಟ್ರಗಳಿಂದ ಪಡೆದ ಉಡುಗೊರೆಗಳ ಮಾರಾಟದಿಂದ ಬಂದ ಹಣವನ್ನು ಬಚ್ಚಿಟ್ಟಿದ್ದಕ್ಕಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಭಾರಿ ಹಿನ್ನಡೆಯಾಗಿದೆ. ತೋಷಾಖಾನ್ ಪ್ರಕರಣದಡಿ ಪಾಕಿಸ್ತಾನದ ಉನ್ನತ ಚುನಾವಣಾ ಸಂಸ್ಥೆ ಶುಕ್ರವಾರ ಇಮ್ರಾನ್ ಖಾನ್ ಅವರನ್ನು ಐದು ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸಿದೆ.
ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ನೇತೃತ್ವದ 5 ಸದಸ್ಯರ ಪೀಠ ಸರ್ವಾನುಮತದ ತೀರ್ಪಿನ ನಂತರ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷರು, ಐದು ವರ್ಷಗಳ ಕಾಲ ಸಂಸತ್ತಿನ ಸದಸ್ಯರಾಗಲು ಸಾಧ್ಯವಿಲ್ಲ. ತೋಷಖಾನಾ ಗಿಫ್ಟ್ ಪ್ರಕರಣದಲ್ಲಿ ತಪ್ಪು ಮಾಹಿತಿ ಘೋಷಣೆ ಹಿನ್ನೆಲೆ ಮಾಜಿ ಪ್ರಧಾನಿ ಇಮ್ರಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದೆ.
ಐವರು ಸದಸ್ಯರ ಪೀಠವು ಸರ್ವಾನುಮತದಿಂದ ಈ ನಿರ್ಧಾರವನ್ನು ಕೈಗೊಂಡಿದೆ. ಆದರೆ, ಸದಸ್ಯರು ಘೋಷಣೆಗೆ ಹಾಜರಾಗಿರಲಿಲ್ಲ. 70 ವರ್ಷದ ಖಾನ್ ವಿರುದ್ಧ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಶಾಸಕರು ಆಗಸ್ಟ್ನಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ (ಇಸಿಪಿ) ದೂರು ನೀಡಿದ್ದರು. ರಿಯಾಯಿತಿ ದರದಲ್ಲಿ ಖರೀದಿಸಿದ ಉಡುಗೊರೆಗಳ ಮಾರಾಟದಿಂದ ಆದಾಯವನ್ನು ಬಹಿರಂಗಪಡಿಸಲು ವಿಫಲರಾದ ಕಾರಣ ಅವರನ್ನು ಅನರ್ಹಗೊಳಿಸುವಂತೆ ಕೋರಿದ್ದರು. ತೋಷಾಖಾನ್ ಗಿಪ್ಟ್ ಪ್ರಕರಣವನ್ನು ಆಲಿಸಿದ ಇಸಿಪಿ ಹಿಂದಿನ ಸೆ. 19 ರಂದು ವಿಚಾರಣೆಯ ಮುಕ್ತಾಯದ ತೀರ್ಪನ್ನು ಕಾಯ್ದಿರಿಸಿತ್ತು. ಇಸಿಪಿಯ ಪೀಠವು ಶುಕ್ರವಾರ, ಖಾನ್ ಅವರು ತೋಷಖಾನಾ ಪ್ರಕರಣದ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ತೀರ್ಪು ನೀಡಿತು. ಈ ತೀರ್ಪು ಹೊರಬಿದ್ದ ಬಳಿಕ ಪಿಟಿಐ ನಾಯಕ ಫವಾದ್ ಚೌಧರಿ ಅವರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸಲು ಸಾರ್ವಜನಿಕರನ್ನು ತಮ್ಮ ಮನೆಗಳಿಂದ ಹೊರಗೆ ಬರುವಂತೆ ಮನವಿ ಮಾಡಿದರು.ಈ ನಿರ್ಧಾರವನ್ನು ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ಘೋಷಿಸಿದರು.