ಇಸ್ಲಾಮಾಬಾದ್ (ಪಾಕಿಸ್ತಾನ): ಸರ್ಕಾರ ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿ ಲಾಭ ಗಳಿಸಿದ ಆರೋಪ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರ ಬೆನ್ನಲ್ಲೇ ಲಾಹೋರ್ನಲ್ಲಿ ಅವರನ್ನು ಶನಿವಾರ ಬಂಧಿಸಲಾಗಿದೆ.
ತಾವು ಅಧಿಕಾರದಲ್ಲಿದ್ದ ದುಬಾರಿ ಉಡುಗೊರೆಗಳ ಮಾರಾಟ ಮಾಡಿ ಭ್ರಷ್ಟಾಚಾರ ಎಸಗಿದ ಆರೋಪವನ್ನು ಇಮ್ರಾನ್ ಖಾನ್ ಎದುರಿಸಿದ್ದಾರೆ. ಇದು ಪಾಕಿಸ್ತಾನದಲ್ಲಿ ತೋಷಖಾನಾ ಪ್ರಕರಣ ಎಂದೇ ಖ್ಯಾತಿ ಪಡೆದಿದೆ. ರಾಷ್ಟ್ರೀಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷದ ಇದೇ ಪ್ರಕರಣದಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗವು ಇಮ್ರಾನ್ ಖಾನ್ ಅವರನ್ನು ಅನರ್ಹಗೊಳಿಸಿತ್ತು.
ಇಸ್ಲಾಮಾಬಾದ್ ಮೂಲದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಹುಮಾಯಾನ್ ದಿಲಾವರ್, ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷರಾದ ಇಮ್ರಾನ್ ಖಾನ್ ವಿರುದ್ಧದ ಆಸ್ತಿಗಳ ಕುರಿತು ತಪ್ಪು ಘೋಷಣೆಯ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ಇಮ್ರಾನ್ ಖಾನ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡವನ್ನು ನ್ಯಾಯಾಧೀಶರು ವಿಧಿಸಿದ್ದಾರೆ. ಈ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.