ಕರಾಚಿ( ಪಾಕಿಸ್ತಾನ): ದೇಶದ ಅತ್ಯಂತ ಜನನಿಬಿಡ ನಗರ ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ಭಾರಿ ಶಸ್ತ್ರಸಜ್ಜಿತ ಪಾಕಿಸ್ತಾನಿ ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಬಂಡುಕೋರರು ಮತ್ತು ಇತರ ನಾಲ್ವರು ಸಾವನ್ನಪ್ಪಿದ್ದಾರೆ. ಭದ್ರತಾ ಪಡೆಗಳ ಮೇಲೆ ಪಾಕಿಸ್ತಾನದಲ್ಲಿ ನಡೆದ ಇತ್ತೀಚಿನ ಭೀಕರ ದಾಳಿ ಇದಾಗಿದೆ. ಪಾಕಿಸ್ತಾನದ ಸ್ಥಳೀಯ ಕಾಲಮಾನ ರಾತ್ರಿ 7:10ರ ಸುಮಾರಿಗೆ ಈ ದಾಳಿ ನಡೆದಿದೆ.
ಕರಾಚಿ ಪೊಲೀಸ್ ಮುಖ್ಯಸ್ಥರ ಮುಖ್ಯ ಕಚೇರಿಯ ಮೇಲೆ ದಾಳಿ ನಡೆದಿರುವುದನ್ನು ಕರಾಚಿ ಪೊಲೀಸ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಕರಾಚಿ ಪೊಲೀಸ್ ಮುಖ್ಯಸ್ಥ ಜಾವೇದ್ ಓಧೋ ಸಹ ತಮ್ಮ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದು ಟ್ವೀಟ್‌ನಲ್ಲಿ ದೃಢಪಡಿಸಿದ್ದಾರೆ. ಪೊಲೀಸ್ ಪಡೆಗಳು ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ನಗರದ ಪೊಲೀಸ್ ಮುಖ್ಯಸ್ಥರ ಐದು ಅಂತಸ್ತಿನ ಕಚೇರಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿವೆ.
ಭಯೋತ್ಪಾದಕರನ್ನು ತಟಸ್ಥಗೊಳಿಸುವಲ್ಲಿ ಕರಾಚಿ ಪೊಲೀಸ್ ಪಡೆಗಳು ಯಶಸ್ವಿಯಾಗಿವೆ. ಆದರೆ ಈ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಾವೇದ್ ಓಧೋ ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ತಿಳಿಸಿದ್ದಾರೆ. ಇನ್ನು ಉಗ್ರರ ದಾಳಿಯಲ್ಲಿ ರೇಂಜರ್ಸ್ ಸಿಬ್ಬಂದಿ ಸೇರಿದಂತೆ 14 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದಲ್ಲಿ ಎಂಟು ಉಗ್ರರು ಇದ್ದರು ಎಂದು ಪೊಲೀಸ್ ಮೂಲಗಳು ಮೊದಲು ತಿಳಿಸಿದ್ದವು.
ಹಿರಿಯ ಪೊಲೀಸ್ ಅಧಿಕಾರಿ, ದಕ್ಷಿಣ ಡಿಐಜಿ ಇರ್ಫಾನ್ ಬಲೂಚ್ ಈ ಬಗ್ಗೆ ಮಾತನಾಡಿ, ಉಗ್ರರು ಕಟ್ಟಡದ ಹಿಂಭಾಗದಿಂದ ಪ್ರವೇಶಿಸಿದರೆ ಇಬ್ಬರು ಪೊಲೀಸ್ ಸಮವಸ್ತ್ರವನ್ನು ಧರಿಸಿ ಮುಖ್ಯ ಗೇಟ್‌ನಿಂದ ಪ್ರವೇಶಿಸಿದ್ದರು ಎಂದು ತಿಳಿಸಿದ್ದಾರೆ. ಇಂದು 7.10 ರ ಸುಮಾರಿಗೆ ಭಯೋತ್ಪಾದಕರಿದ್ದ ಎರಡು ಕಾರುಗಳು ಕಟ್ಟಡದ ಹಿಂಭಾಗದ ಪ್ರವೇಶದ್ವಾರದಲ್ಲಿ ಮತ್ತು ಮುಂಭಾಗದಲ್ಲಿ ಒಂದು ಬಾಗಿಲು ತೆರೆದಿರುವುದನ್ನು ನಾವು ಕಂಡುಕೊಂಡಿದ್ದೇವೆ. ಬಾಂಬ್ ನಿಷ್ಕ್ರಿಯ ದಳವು ಎರಡೂ ಕಾರುಗಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿವೆ. ಅದರಲ್ಲಿ ಸ್ಫೋಟಕ ಸಾಧನಗಳು, ಭಯೋತ್ಪಾದಕರ ಆತ್ಮಹತ್ಯಾ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದರು. ಈ ಮಧ್ಯೆ ದಾಳಿಯ ಹೊಣೆಯನ್ನು ಪಾಕಿಸ್ತಾನದ ತಾಲಿಬಾನ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ.