ಇಸ್ಲಾಮಾಬಾದ್ : ನಾಲ್ಕು ತಿಂಗಳ ಹಿಂದೆ ಅಪಹರಣಕ್ಕೀಡಾಗಿದ್ದ ಪಾಕಿಸ್ತಾನದ ಪ್ರಮುಖ ಪತ್ರಕರ್ತ ಮತ್ತು ನಿರೂಪಕ ಇಮ್ರಾನ್ ರಿಯಾಜ್ ಖಾನ್ ಅವರನ್ನು ಕೊನೆಗೂ ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ. ಇಮ್ರಾನ್ ರಿಯಾಜ್ ಖಾನ್ ಪಾಕಿಸ್ತಾನದ ಮಿಲಿಟರಿ ವ್ಯವಸ್ಥೆಯ ವಿರುದ್ಧ ತಮ್ಮ ಬಹಿರಂಗ ನಿಲುವು ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬಹಿರಂಗವಾಗಿ ಬೆಂಬಲ ನೀಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅಪಹರಣಕ್ಕೀಡಾಗಿದ್ದ ಅವರು ಸೋಮವಾರ ಕೊನೆಗೂ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.
ರಿಯಾಜ್ ಖಾನ್ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂಬ ವರದಿಗಳನ್ನು ಸಿಯಾಲ್ಕೋಟ್ ಪೊಲೀಸರು ದೃಢಪಡಿಸಿದ್ದಾರೆ. "ಪತ್ರಕರ್ತ ಮತ್ತು ನಿರೂಪಕ ಇಮ್ರಾನ್ ರಿಯಾಜ್ ಖಾನ್ ಅವರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಈಗ ಅವರು ಈಗ ತಮ್ಮ ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ. ಇಮ್ರಾನ್ ರಿಯಾಜ್ ಖಾನ್ ಸುರಕ್ಷಿತವಾಗಿ ತಮ್ಮ ಕುಟುಂಬಕ್ಕೆ ಮರಳಿದ್ದಾರೆ ಎಂಬ ಸುದ್ದಿಯನ್ನು ಅವರ ವಕೀಲ ಅಶ್ಫಾಕ್ ಕೂಡ ದೃಢಪಡಿಸಿದ್ದಾರೆ.
"ದೇವರ ವಿಶೇಷ ಆಶೀರ್ವಾದ, ಕೃಪೆ ಮತ್ತು ಕರುಣೆಯಿಂದ ನಮ್ಮ ರಾಜಕುಮಾರನನ್ನು ಮರಳಿ ಕರೆತಂದಿದ್ದೇವೆ. ದುರ್ಬಲ ನ್ಯಾಯಾಂಗ ಮತ್ತು ಕಾನೂನು ಅವ್ಯವಸ್ಥೆಯಿಂದ ಕೂಡಿದ ಸಂವಿಧಾನದ ಪ್ರಸ್ತುತ ಸ್ಥಿತಿ ಸೇರಿದಂತೆ ಅನೇಕ ತೊಂದರೆಗಳಿಂದಾಗಿ ಅವರ ಬಿಡುಗಡೆ ಸಾಕಷ್ಟು ವಿಳಂಬವಾಯಿತು" ಎಂದು ಅವರು ಹೇಳಿದರು.