ಇಸ್ಲಾಮಾಬಾದ್ (ಪಾಕಿಸ್ತಾನ):ಪಾಕಿಸ್ತಾನದ ಕರಾಚಿ ಫೆಡರಲ್ ಬಿ ಏರಿಯಾದ ಆಯೇಶಾ ಮಂಜಿಲ್ ಬಳಿ ಬುಧವಾರ ಅಗ್ನಿ ಅವಘಡ ಸಂಭವಿಸಿದ್ದರಿಂದ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ. ಕರಾಚಿಯ ಫೆಡರಲ್ ಬಿ ಏರಿಯಾದ ಆಯೇಶಾ ಮಂಜಿಲ್ ಬಳಿ ಇರುವ ಆರ್ಶಿ ಶಾಪಿಂಗ್ ಸೆಂಟರ್‌ನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡು ಮೂವರು ಸಾವನ್ನಪ್ಪಿದ್ದಾರೆ.
ಕರಾಚಿಯ ಅರ್ಶಿ ಶಾಪಿಂಗ್ ಸೆಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಬಳಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಕೂಡ ಇತ್ತು ಎಂದು ವರದಿಯಾಗಿದೆ. ದೂರದರ್ಶನದಲ್ಲಿ ಪ್ರಸಾರವಾದ ದೃಶ್ಯಾವಳಿಗಳು ಬೆಂಕಿ ಹೊತ್ತಿಕೊಂಡಿದ್ದರಿಂದ ಆಕಾಶದಲ್ಲಿ ಕಪ್ಪು ಹೊಗೆ ಆವರಿಸಿರುವುದು ಕಂಡು ಬಂದಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
"ಈಗಾಗಲೇ ಮೂವರ ಮೃತದೇಹ ಪತ್ತೆಯಾಗಿದೆ. ಜೊತೆಗೆ ಕಟ್ಟಡದಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾನು ಸ್ಥಳದಲ್ಲಿ ಹಾಜರಿದ್ದೇನೆ. ಆಯೆಶಾ ಮಂಜಿಲ್‌ನಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ಹತೋಟಿಗೆ ತರಲು ಕಾರ್ಯದಲ್ಲಿ ಅಗ್ನಿಶಾಮಕ ದಳದ ತಂಡ ಮುಂದಾಗಿದೆ. ಅಗತ್ಯ ಇದ್ದರೆ ಛಾವಣಿಯಿಂದ ಜನರನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಗುವುದು. ಎಲ್ಲರ ರಕ್ಷಣೆಗಾಗಿ ಕ್ರಮ ವಹಿಸಲಾಗಿದೆ" ಎಂದು ಕರಾಚಿ ಮೇಯರ್ ಮುರ್ತಾಜಾ ವಹಾಬ್ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸ್ವಲ್ಪ ಮಟ್ಟಿಗೆ ಬೆಂಕಿ ನಿಯಂತ್ರಣ:''ಬೆಂಕಿ ಇಡೀ ಕಟ್ಟಡವನ್ನು ಆವರಿಸಿದೆ. ನೆಲ ಮಹಡಿ ಸೇರಿದಂತೆ ನಾಲ್ಕು ಮಹಡಿಗಳವರೆಗೆ ಬೆಂಕಿ ಕಾಣಿಸಿಕೊಂಡಿದೆ. ಎಂಟು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಸ್ವಲ್ಪ ಮಟ್ಟಿಗೆ ಬೆಂಕಿಯನ್ನು ನಿಯಂತ್ರಿಸಲಾಗಿದೆ'' ಎಂದು ಜೌಹರಾಬಾದ್ ಸ್ಟೇಷನ್ ಹೌಸ್ ಆಫೀಸರ್ ಸುದೀರ್ ಭಯೋ ತಿಳಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.