ಇಸ್ಲಾಮಾಬಾದ್:ಚೀನಾದ ನೆರವಿನಲ್ಲಿ ತನ್ನ ಸೇನಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುತ್ತಿರುವ ಪಾಕಿಸ್ತಾನ ಈಚೆಗಷ್ಟೇ ಅಣ್ವಸ್ತ್ರ ಸಿಡಿತಲೆಗಳನ್ನು ಸಾಗಿಸುವ 'ಬ್ಯಾಲಿಸ್ಟಿಕ್ ಕ್ಷಿಪಣಿ ಅಬಾಬೀಲ್ ವೆಪನ್ ಸಿಸ್ಟಮ್'ನ ಹಾರಾಟ ಪರೀಕ್ಷೆ ನಡೆಸಿತ್ತು. ಇದೀಗ ನೆರೆ ರಾಷ್ಟ್ರ ಮಂಗಳವಾರ 'ಘೌರಿ ವೆಪನ್ ಸಿಸ್ಟಮ್' ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ವರದಿಯಾಗಿದೆ.
ಸೇನಾಪಡೆಗಳಿಗೆ ಅತಿಮುಖ್ಯವಾಗಿರುವ ಸಿಡಿತಲೆಗಳನ್ನು ಸಾಗಿಸಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆ ಇದಾಗಿದ್ದು, ಅದರ ನಿಖರ ಗುರಿ ಸಾಧನೆ ಮತ್ತು ತಾಂತ್ರಿಕ ಸತ್ವದ ಪರೀಕ್ಷೆ ನಡೆಸಲಾಗಿದೆ. ಅದು ಯಶಸ್ವಿಯಾಗಿ ಹಾರಾಟ ನಡೆಸಿದೆ ಎಂದು ಪಾಕಿಸ್ತಾನ ಸೇನೆಯ ಭಾಗವಾದ ಆರ್ಮಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಎಸ್‌ಎಫ್‌ಸಿ) ಹೇಳಿಕೆಯಲ್ಲಿ ತಿಳಿಸಿದೆ.
ಘೌರಿ ವೆಪನ್ ಸಿಸ್ಟಮ್ ಉಡಾವಣೆಗೆ ಅಧ್ಯಕ್ಷ ಆರಿಫ್ ಅಲ್ವಿ, ಹಂಗಾಮಿ ಪ್ರಧಾನ ಮಂತ್ರಿ ಅನ್ವಾರುಲ್ ಹಕ್ ಕಾಕರ್, ಸೇನಾ ಮುಖ್ಯಸ್ಥರು, ಎಎಸ್‌ಎಫ್‌ಸಿ ಕಮಾಂಡರ್, ವ್ಯೂಹಾತ್ಮಕ ಪಡೆಗಳ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸಾಕ್ಷಿಯಾಗಿದ್ದರು. ಇದೇ ವೇಳೆ ಪಾಕಿಸ್ತಾನದ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಲು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ನೀಡಿದ ಕೊಡುಗೆಯನ್ನು ಎಎಸ್‌ಎಫ್‌ಸಿಯ ಕಮಾಂಡರ್ ಶ್ಲಾಘಿಸಿದ್ದಾರೆ.
ಇದಕ್ಕೂ ಮೊದಲು, ಅಕ್ಟೋಬರ್ 18ರಂದು ಪಾಕಿಸ್ತಾನವು, ಅಬಾಬೀಲ್ ವೆಪನ್ ಸಿಸ್ಟಮ್ ಹೆಸರಿನ ಬ್ಯಾಲಿಸ್ಟಿಕ್ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು.