ಕರಾಚಿ (ಪಾಕಿಸ್ತಾನ):ಮುಕ್ತ ಮತ್ತು ಅಂತರಬ್ಯಾಂಕ್ ಮಾರುಕಟ್ಟೆಯಲ್ಲಿ ರೂಪಾಯಿ ಅಪಮೌಲ್ಯದ ನಂತರ, ಪಾಕಿಸ್ತಾನದ ಸ್ಟಾಕ್ ಎಕ್ಸ್‌ಚೇಂಜ್ (ಪಿಎಸ್‌ಎಕ್ಸ್) ಬೆಂಚ್‌ಮಾರ್ಕ್ ಸೂಚ್ಯಂಕವು 1,000 ಅಂಕಗಳಿಗಿಂತ ಹೆಚ್ಚು ಏರಿಕೆ ಕಂಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಆರಿಫ್ ಹಬೀಬ್ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ತಾಹಿರ್ ಅಬ್ಬಾಸ್, ರೂಪಾಯಿಯ ತೀವ್ರ ಕುಸಿತವು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಭಾವನೆಯನ್ನು ಉಂಟುಮಾಡಿದೆ ಎಂದಿದ್ದಾರೆ.
ಮಾರುಕಟ್ಟೆಯ ಹಿಂದಿನ ಪ್ರೇರಕ ಶಕ್ತಿಯು ರೂಪಾಯಿಯ ಮಾರುಕಟ್ಟೆ ಆಧಾರಿತ ವಿನಿಮಯ ದರವಾಗಿದೆ. ಇದು ಹೂಡಿಕೆದಾರರ ಮನಸ್ಸಿನಲ್ಲಿದ್ದ ಅನಿಶ್ಚಿತತೆಯನ್ನು ದೂರ ಮಾಡಲು ಸಹಾಯ ಮಾಡಿದೆ ಎಂದು ಅಬ್ಬಾಸ್ ಹೇಳಿದರು. ಮಾರುಕಟ್ಟೆಯು ಚೇತರಿಸಿಕೊಳ್ಳಲು ಮತ್ತು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲು ಸರ್ಕಾರದ ಕ್ರಮಗಳು ಸಹಾಯ ಮಾಡುತ್ತಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಾರ್ಯಕ್ರಮದ ಪುನರುಜ್ಜೀವನದ ಅನಿಶ್ಚಿತತೆಯಿಂದ ಹೂಡಿಕೆದಾರರು ಇಕ್ಕಟ್ಟಿನ ಸ್ಥಿತಿಯಲ್ಲಿದ್ದರು.
ಮುಂದಿನ ಎಂಟರಿಂದ 10 ದಿನಗಳಲ್ಲಿ ಮಿನಿ ಬಜೆಟ್ ಅನ್ನು ನಿರೀಕ್ಷಿಸಲಾಗಿದೆ. ಅನಿಲ ಮತ್ತು ವಿದ್ಯುತ್ ದರಗಳು ಹೆಚ್ಚಾಗಬಹುದು ಮತ್ತು ಹೆಚ್ಚಿನ ತೆರಿಗೆಗಳನ್ನು ವಿಧಿಸಬಹುದು ಎಂದು ಅಬ್ಬಾಸ್ ತಿಳಿಸಿದ್ದಾರೆ. ಪಾಕಿಸ್ತಾನದ ರೂಪಾಯಿಯು ಎರಡು ದಶಕಗಳ ಇತಿಹಾಸದಲ್ಲಿಯೇ ಡಾಲರ್ ಎದುರು ತನ್ನ ಅತಿದೊಡ್ಡ ಏಕದಿನ ಕುಸಿತವನ್ನು ದಾಖಲಿಸಿದೆ. ವಿದೇಶಿ ವಿನಿಮಯ ಮೀಸಲುಗಳು ವೇಗವಾಗಿ ಖಾಲಿಯಾದ ನಂತರ ಮತ್ತು ಕರೆನ್ಸಿಯ ಮೇಲಿನ ತನ್ನ ಹಿಡಿತವನ್ನು ಸಡಿಲಿಸಲು ಐಎಂಎಫ್ ಸರ್ಕಾರವನ್ನು ಒತ್ತಾಯಿಸಿದ ನಂತರ ಪಾಕ್ ರೂಪಾಯಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಕುಸಿತ ಉಂಟಾಗಿದೆ.