ಇಸ್ಲಾಮಾಬಾದ್ (ಪಾಕಿಸ್ತಾನ):ಆರ್ಥಿಕ ಸಂಕಷ್ಟದಿಂದ ಹೈರಾಣಾಗಿರುವ ನೆರೆ ದೇಶ ಪಾಕಿಸ್ತಾನ ದುಸ್ಥಿತಿಯಿಂದ ಹೊರಬರಲು ಸರ್ಕಾರಿ ನೌಕರರ ವೇತನ ಕಡಿತ, ಸಬ್ಸಿಡಿ ರದ್ದು ಹಾಗು ವಿದ್ಯುತ್ ಉಳಿತಾಯದಂತಹ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಮಧ್ಯೆ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಕೊಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 35 ರೂಪಾಯಿಯಷ್ಟು ಹೆಚ್ಚಿಸಿದೆ. ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಭಾನುವಾರ ಈ ಕುರಿತು ಹೇಳಿಕೆ ನೀಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯಿಂದ ಹೊಸ ಬೆಲೆಗಳು ಜಾರಿಗೆ ಬರಲಿವೆ.
ಜಾಗತಿಕ ಆರ್ಥಿಕ ನೆರವಿನ ಪ್ಯಾಕೇಜ್‌ಗೆ ವಿಧಿಸಲಾದ ಷರತ್ತುಗಳ ಕುರಿತು ಚರ್ಚಿಸಲು ಜನವರಿ 31 ರಿಂದ ಫೆಬ್ರವರಿ 9 ರವರೆಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ತಜ್ಞರ ತಂಡ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದು, ಬಳಿಕ ಈ ನಿರ್ಧಾರ ಹೊರಬಿದ್ದಿದೆ. "ಪಾಕಿಸ್ತಾನದಲ್ಲಿ ಕಳೆದ ವರ್ಷದ ಅಕ್ಟೋಬರ್‌ನಿಂದ ಪೆಟ್ರೋಲ್ ಬೆಲೆ ಏರಿಕೆಯಾಗಿಲ್ಲ. ಡೀಸೆಲ್ ಮತ್ತು ಸೀಮೆಎಣ್ಣೆ ಬೆಲೆಯನ್ನು ಕಡಿಮೆ ಮಾಡಿದ್ದೇವೆ. ಈಗ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತಲಾ 35 ರೂಪಾಯಿಯಷ್ಟು ಹೆಚ್ಚಿಸಲು ನಿರ್ಧರಿಸಿದ್ದೇವೆ. ಸೀಮೆಎಣ್ಣೆ ಮತ್ತು ಲಘು ಡೀಸೆಲ್ ಬೆಲೆಯಲ್ಲಿ ತಲಾ 18 ರೂ.ಗಳಷ್ಟು ಏರಿಕೆಯಾಗಿದೆ" ಎಂದು ಇಶಾಕ್ ದಾರ್ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಸದ್ಯ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 249.80 ರೂ. ಹೈ ಸ್ಪೀಡ್ ಡೀಸೆಲ್ ದರ 262.80 ರೂ, ಸೀಮೆ ಎಣ್ಣೆ 189.83 ರೂ ಮತ್ತು ಲೈಟ್ ಡೀಸೆಲ್ ತೈಲ 187 ರೂ.ಗೆ ತಲುಪಿದೆ. ಬೆಲೆ ಏರಿಕೆ ಘೋಷಣೆಯಾದ ತಕ್ಷಣ ವಾಹನ ಸವಾರರು ಬಂಕ್ಗಳಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಲೆ ಏರಿಕೆ ನೀತಿಯನ್ನು ಖಂಡಿಸಿದ್ದಾರೆ. ಪ್ರಸ್ತುತ ಸರ್ಕಾರ ದೇಶದ ಆರ್ಥಿಕತೆಯ ನಿರ್ವಹಣೆಯನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಟೀಕಿಸಿದ್ದಾರೆ.