ಕರಾಚಿ (ಪಾಕಿಸ್ತಾನ) : ರಾಜಕೀಯದಲ್ಲಿ ಸೇನೆಯ ಹಸ್ತಕ್ಷೇಪಕ್ಕೆ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ವಿರೋಧ ಹೊಂದಿಲ್ಲ, ಆದರೆ ಸೇನೆಯು ತನ್ನನ್ನು ಬೆಂಬಲಿಸುತ್ತಿಲ್ಲ ಎಂಬ ಕಾರಣಕ್ಕೆ ಅವರು ಹತಾಶರಾಗಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ. "ಕಳೆದ ವರ್ಷದ ಏಪ್ರಿಲ್‌ನಲ್ಲಿ ಸೇನೆಯು ತಾನು ಇನ್ನು ಮುಂದೆ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲ್ಲ ಮತ್ತು ಯಾವುದೇ ಪಕ್ಷದ ಪರ ವಹಿಸಿಕೊಳ್ಳಲ್ಲ ಎಂದು ಹೇಳಿದಾಗಿನಿಂದ ಇಮ್ರಾನ್ ಖಾನ್ ಅವರಿಗೆ ಸಮಸ್ಯೆಗಳು ಆರಂಭವಾಗಿವೆ" ಎಂದು ಬಿಲಾವಲ್ ಕುಟುಕಿದ್ದಾರೆ.
"ಪಾಕಿಸ್ತಾನದಲ್ಲಿ ಸೇನೆಯು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂಬುದು ಅವರ ಸಮಸ್ಯೆಯಲ್ಲ, ಆದರೆ ತಮ್ಮನ್ನು ಬೆಂಬಲಿಸಲು ಸೇನೆ ಮುಂದಾಗುತ್ತಿಲ್ಲ ಎಂಬುದೇ ಅವರ ಪ್ರಮುಖ ಸಮಸ್ಯೆಯಾಗಿದೆ. ದೇಶದ ರಾಜಕೀಯದಲ್ಲಿ ಸೇನೆಯ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ನಮ್ಮ ಇತಿಹಾಸದ ಅರ್ಧಕ್ಕಿಂತಲೂ ಹೆಚ್ಚು ಅವಧಿಗೆ ಮಿಲಿಟರಿ ಆಡಳಿತ ನಡೆಸಿದೆ. ನನ್ನ ಪಕ್ಷವಾದ ಪಿಪಿಪಿ ಪಾಕಿಸ್ತಾನದ ಇತಿಹಾಸದಲ್ಲಿ ಎದುರಾದ ಪ್ರತಿಯೊಂದು ಸರ್ವಾಧಿಕಾರ ಸರ್ಕಾರವನ್ನು ಪ್ರಶ್ನಿಸಿದೆ" ಎಂದು ಅವರು ತಿಳಿಸಿದರು.
ಮಾಜಿ ಅಧ್ಯಕ್ಷ ಜನರಲ್ (ನಿವೃತ್ತ) ಪರ್ವೇಜ್ ಮುಷರಫ್ ಅವರ ಕೊನೆಯ ಸರ್ವಾಧಿಕಾರ ಆಡಳಿತ ಸೇರಿದಂತೆ ಪಾಕಿಸ್ತಾನದ ಪ್ರತಿಯೊಂದು ಸರ್ವಾಧಿಕಾರಿ ಆಡಳಿತಗಳನ್ನು ಇಮ್ರಾನ್ ಬೆಂಬಲಿಸಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿ ಪ್ರತಿಯೊಬ್ಬ ನಿರಂಕುಶಾಧಿಕಾರಿಯನ್ನು ಅವರು ಬೆಂಬಲಿಸಿದ್ದಾರೆ ಎಂದು ಬಿಲಾವಲ್ ಹೇಳಿದರು. 2018 ರಲ್ಲಿ ಇಮ್ರಾನ್ ಖಾನ್ ಹೇಗೆ ಅಧಿಕಾರಕ್ಕೆ ಬಂದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಪಾಕಿಸ್ತಾನ ಸೇನೆಯ ಕೆಲ ಮಾಜಿ ಅಧಿಕಾರಿಗಳ ಸಹಾಯದಿಂದ ಚುನಾವಣಾ ಅಕ್ರಮಗಳನ್ನು ಎಸಗಿ ಇಮ್ರಾನ್ ಅವರನ್ನು ಅಧಿಕಾರಕ್ಕೆ ತರಲಾಯಿತು ಎಂಬುದು ಸ್ಥಾಪಿತ ಸತ್ಯ ಎಂದು ಅವರು ತಿಳಿಸಿದರು.