ಇಸ್ಲಾಮಾಬಾದ್(ಪಾಕಿಸ್ತಾನ): ಪ್ರಧಾನಿ ಇಮ್ರಾನ್ ಖಾನ್ ಸಲಹೆಯಂತೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ವಿಸರ್ಜಿಸಿದ್ದಾರೆ. ಇದಕ್ಕೂ ಮುನ್ನ ರಾಷ್ಟ್ರೀಯ ಅಸೆಂಬ್ಲಿಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಡೆಪ್ಯುಟಿ ಸ್ಪೀಕರ್ ಖಾಸಿಂ ಸೂರಿ, 'ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಸಂವಿಧಾನದ 5ನೇ ವಿಧಿಯ ಉಲ್ಲಂಘನೆಯಾಗಿದೆ' ಎಂದು ಅಭಿಪ್ರಾಯಪಟ್ಟಿದ್ದು, ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಇಮ್ರಾನ್ ಖಾನ್ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಸಲಹೆ ನೀಡಿದ್ದರು.
ಇದಾದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದ ಇಮ್ರಾನ್ ಖಾನ್, ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ನಾನು ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆಗಳು ನಡೆಯಬೇಕು. ಚುನಾವಣೆಗೆ ಸಿದ್ಧರಾಗುವಂತೆ ಪಾಕಿಸ್ತಾನದ ಜನರಿಗೆ ಕರೆ ನೀಡುತ್ತೇನೆ ಎಂದಿದ್ದರು.
ಪಾಕ್ ಸಂಸತ್ ವಿಸರ್ಜನೆಗೊಂಡ ಕಾರಣದಿಂದ ಮುಂದಿನ 90 ದಿನಗಳಲ್ಲಿ ಚುನಾವಣೆ ನಡೆಯಲಿದೆ. ಇಮ್ರಾನ್ ಖಾನ್ ತಮ್ಮ ಭಾಷಣದಲ್ಲಿ, ಸ್ಪೀಕರ್ ನಿರ್ಧಾರಕ್ಕೆ ಪ್ರತಿಯೊಬ್ಬ ಪಾಕಿಸ್ತಾನಿಯನ್ನು ಅಭಿನಂದಿಸುತ್ತೇನೆ. ಅವಿಶ್ವಾಸ ನಿರ್ಣಯವು ನಮ್ಮ ವಿರುದ್ಧ ವಿದೇಶಿ ಷಡ್ಯಂತ್ರವಾಗಿದೆ. ನಮ್ಮನ್ನು ಯಾರು ಆಳಬೇಕು ಎಂಬುದನ್ನು ಪಾಕಿಸ್ತಾನವೇ ನಿರ್ಧರಿಸಬೇಕು ಎಂದಿದ್ದಾರೆ. ಜನರು ಯಾವುದೇ ಪಿತೂರಿಯನ್ನು ಯಶಸ್ವಿಯಾಗಲು ಬಿಡುವುದಿಲ್ಲ. ಸ್ಪೀಕರ್ ತಮ್ಮ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಂಡು ಅವಿಶ್ವಾಸ ನಿರ್ಣಯದ ವಿರುದ್ಧ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.
ಇದರ ಜೊತೆಗೆ, ಪ್ರಜಾಸತ್ತಾತ್ಮಕ ಸಮಾಜದಲ್ಲಿರುವ ನಾವು ಜನರ ಬಳಿಗೆ ಹೋಗಬೇಕು. ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ಚುನಾವಣೆಗಳು ನಿರ್ಣಯಿಸಲಿವೆ. ದೇಶದ ಹೊರಗಿನಿಂದ ಅಥವಾ ಭ್ರಷ್ಟರಿಂದ ಯಾವುದೇ ಪಿತೂರಿಯ ಮೂಲಕ ಪಾಕಿಸ್ತಾನದ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಸರ್ಕಾರವನ್ನು ಉರುಳಿಸಲು ಯತ್ನಿಸಿದವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದು, ವ್ಯರ್ಥವಾಗಲಿದೆ ಎಂದು ಇಮ್ರಾನ್ ಹೇಳಿದ್ದಾರೆ.
ಇದನ್ನೂ ಓದಿ:ದ.ಕೊರಿಯಾ ವಿರುದ್ಧ ಗಂಭೀರ ಬೆದರಿಕೆಯ ಎಚ್ಚರಿಕೆ ನೀಡಿದ ಕಿಮ್ ಯೋ ಜಾಂಗ್