ಇಸ್ಲಾಮಾಬಾದ್ : 2024ರ ಹೊಸ ವರ್ಷದ ಸಂಭ್ರಮಾಚರಣೆಯನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ. ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ನಡುವಿನ ದಾಳಿಯನ್ನು ಖಂಡಿಸಿ, ಪ್ಯಾಲೆಸ್ಟೀನ್ ಪರವಾಗಿ ಗಾಜಾದಲ್ಲಿರುವ ಜನರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಗುರುವಾರ ದೇಶದಲ್ಲಿ ಹೊಸ ವರ್ಷ ಆಚರಣೆಯನ್ನು ನಿಷೇಧಿಸಿರುವುದಾಗಿ ಘೋಷಿಸಿದ್ದಾರೆ.
ರಾಷ್ಟ್ರವನ್ನುದ್ದೇಶಿಸಿ ಸಂಕ್ಷಿಪ್ತ ಭಾಷಣ ಮಾಡಿದ ಕಾಕರ್, "ಪ್ಯಾಲೆಸ್ಟೀನಿಯನ್ನರೊಂದಿಗೆ ಒಗ್ಗಟ್ಟನ್ನು ತೋರಿಸಲು ಮತ್ತು ಹೊಸ ವರ್ಷದಲ್ಲಿ ಸಮಚಿತ್ತತೆ ಮತ್ತು ನಮ್ರತೆಯನ್ನು ಪ್ರದರ್ಶಿಸಲು ಒತ್ತಾಯಿಸಿದರು. ಪ್ಯಾಲೆಸ್ಟೀನ್ನಲ್ಲಿನ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ನಮ್ಮ ಸಹೋದರ- ಸಹೋದರಿಯರೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಹೊಸ ವರ್ಷಕ್ಕೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸುವುದನ್ನು ಸರ್ಕಾರವು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ" ಎಂದು ಹೇಳಿದ್ದಾರೆ.