ಇಸ್ಲಾಮಾಬಾದ್ (ಪಾಕಿಸ್ತಾನ):ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ನೆರೆರಾಷ್ಟ್ರ ಪಾಕಿಸ್ತಾನ 2023- 24 ನೇ ಸಾಲಿನ ಬಜೆಟ್ ಮಂಡಿಸಿತ್ತು. ಸಂಸತ್ತು ಜೂನ್ 25 ರಂದು ಈ ಹಣಕಾಸು ವರ್ಷಕ್ಕೆ 14.48 ಲಕ್ಷ ಕೋಟಿ ರೂ.ಗಳ ಆಯವ್ಯಯಕ್ಕೆ ಅನುಮೋದನೆ ನೀಡಿದೆ. ಜಿಡಿಪಿ ಬೆಳವಣಿಗೆ ಶೇ.3.5 ಎಂದು ಅಂದಾಜಿಸಲಾಗಿದೆ.
ಬಜೆಟ್‌ನಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆ ದರ ಶೇ.3.5 ಗುರಿಯನ್ನು ನಿಗದಿಪಡಿಸಲಾಗಿದೆ. 9,200 ಮಿಲಿಯನ್ ಡಾಲರ್ ತೆರಿಗೆ ಸಂಗ್ರಹದ ಗುರಿಯನ್ನು ಬಜೆಟ್‌ನಲ್ಲಿ ನಿಗದಿಪಡಿಸಲಾಗಿತ್ತು. ಐಎಂಎಫ್ನ ಪರಿಹಾರ ಪ್ಯಾಕೇಜ್ನ 215 ಮಿಲಿಯನ್ ಸೇರಿಸಿ 9,415 ಮಿಲಯನ್ ಡಾಲರ್ಗೆ ಹೆಚ್ಚಿಸಲಾಗಿದೆ. 85 ಮಿಲಿಯನ್ ಡಾಲರ್ ವೆಚ್ಚವನ್ನು ಕಡಿತಗೊಳಿಸಬೇಕು ಎಂಬ IMF ನ ಬೇಡಿಕೆಯನ್ನೂ ಸರ್ಕಾರ ಒಪ್ಪಿಕೊಂಡಿದೆ.
ತೆರಿಗೆ ಸೇರಿದಂತೆ ಇನ್ನಿತರ ವೆಚ್ಚಗಳನ್ನು ಕಡಿಮೆ ಮಾಡುವ ಕುರಿತು ನಡೆದ ಚರ್ಚೆಗಳ ಬಳಿಕ ಬಜೆಟ್‌ನಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹಣಕಾಸು ಸಚಿವ ಇಶಾಕ್ ದಾರ್ ಬಜೆಟ್ ಮೇಲಿನ ಚರ್ಚೆಯಲ್ಲಿ ತಿಳಿಸಿದರು.
ರಕ್ಷಣಾ ಕ್ಷೇತ್ರಕ್ಕೆ ದುಪ್ಪಟ್ಟು:ದೇಶ ಮೂಲಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಶೇ.15.5 ರಷ್ಟು ಹೆಚ್ಚಿನ ಹಣಕಾಸು ನೆರವು ನಿಗದಿ ಮಾಡಲಾಗಿದೆ. ಹೀಗಾಗಿ ರಕ್ಷಣಾ ಕ್ಷೇತ್ರಕ್ಕೆ 1.8 ಲಕ್ಷ ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ ಎಂದು ಹಣಕಾಸು ಸಚಿವ ಇಶಾಕ್ ದಾರ್ ತಿಳಿಸಿದರು.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಕೆಡವಿದ ಬಳಿಕ ಪ್ರಧಾನಿ ಶಹಬಾಜ್ ಷರೀಫ್ ನೇತೃತ್ವದ ಈಗಿನ ಸರ್ಕಾರ 1,532 ಲಕ್ಷ ಕೋಟಿ ರೂಪಾಯಿ ರಕ್ಷಣಾ ಕ್ಷೇತ್ರಕ್ಕೆ ನೀಡಿತ್ತು. ಈ ಬಜೆಟ್‌ನಲ್ಲಿ 15 ಪ್ರತಿಶತದಷ್ಟು ಹೆಚ್ಚಳಗೊಳಿಸಿ 1,804 ಲಕ್ಷ ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದೆ.
ಈ ಬಜೆಟ್ ಅನ್ನು 'ಚುನಾವಣಾ ಬಜೆಟ್' ಎಂದು ನೋಡಬಾರದು. ಇದು ಜವಾಬ್ದಾರಿಯುತ ಬಜೆಟ್ ಆಗಿದೆ. ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಎಲ್ಲ ಪಕ್ಷಗಳು ಸಿದ್ಧವಾಗುತ್ತಿವೆ. ಚುನಾವಣೆಯ ದೃಷ್ಟಿಯಿಂದ ಈ ಬಜೆಟ್ ಮಂಡನೆ ಮಾಡಲಾಗಿಲ್ಲ ಎಂದು ದಾರ್ ತಿಳಿಸಿದರು.
ಮುಂದಿನ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ.21 ರಷ್ಟಿದ್ದರೆ, ಬಜೆಟ್ ಕೊರತೆಯು ಜಿಡಿಪಿಯ ಶೇ 6.54 ರಷ್ಟಿರುತ್ತದೆ ಎಂದು ಅವರು ಹೇಳಿದರು. ರಫ್ತು ಗುರಿ 30 ಮಿಲಿಯನ್ ಡಾಲರ್ ಆಗಿದ್ದರೆ, 33 ಮಿಲಿಯನ್ ಡಾಲರ್ ಆಮದು ಗುರಿ ಹೊಂದಿದೆ ಎಂದು ಅವರು ವಿವರಿಸಿದರು.
ಐಎಂಎಫ್ನಿಂದ ಸಾಲ:ಪ್ಯಾರಿಸ್‌ನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಹಣಕಾಸು ಸಮ್ಮೇಳನದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರನ್ನು ಭೇಟಿಯಾಗಿ ದೇಶ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕಾರಣ ಸಾಲವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಇದನ್ನು ಮನ್ನಿಸಿರುವ ಐಎಂಎಫ್ 215 ಮಿಲಿಯನ್ ಡಾಲರ್ ಹಣವನ್ನು ಸಾಲದ ಪರಿಹಾರವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಇದಕ್ಕೆ ಅನುಗುಣವಾಗಿ ಸರ್ಕಾರ ಅದರ ಮೇಲಿನ ತೆರಿಗೆಗಳನ್ನು ಕೈಬಿಟ್ಟಿದೆ.
ಇದನ್ನೂ ಓದಿ:ವಿಶ್ವದಲ್ಲಿಯೇ ಭಾರತ & ಅಮೆರಿಕ ನಡುವಣ ಸ್ನೇಹ ಅತ್ಯಂತ ಪರಿಣಾಮಕಾರಿಯಾಗಿದೆ: ಬೈಡನ್ ಟ್ವೀಟ್