ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ದುರ್ಷರ್ಮಿಗಳು, ಚರ್ಚ್ ಧ್ವಂಸಗೊಳಿಸಿದ್ದಷ್ಟೇ ಅಲ್ಲದೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಇದೀಗ ಗಲಭೆಯಲ್ಲಿ ಭಾಗಿಯಾಗಿದ್ದ 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಮಧ್ಯಂತರ ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.
ಧರ್ಮನಿಂದನೆ ಆರೋಪದ ಮೇಲೆ ಪಾಕಿಸ್ತಾನದ ಫೈಸಲಾಬಾದ್‌ನ ಜರನ್‌ವಾಲಾ ಜಿಲ್ಲೆಯಲ್ಲಿ ಬುಧವಾರ ಹಲವಾರು ಚರ್ಚ್‌ಗಳನ್ನು ಧ್ವಂಸಗೊಳಿಸಲಾಗಿದೆ. ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಪ್ರಾಂತೀಯ ಸರ್ಕಾರ ಆದೇಶಿಸಿದೆ ಎಂದು ಪಂಜಾಬ್ ಸರ್ಕಾರದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಹಂಗಾಮಿ ಪಂಜಾಬ್ ಮಾಹಿತಿ ಸಚಿವ ಅಮೀರ್ ಮಿರ್ ಅವರು ಮಾಹಿತಿ ನೀಡಿ, ಪ್ರದೇಶದಲ್ಲಿ ಶಾಂತಿ ಕದಡುವ ಜನರನ್ನು ಬಂಧಿಸಲಾಗಿದೆ. ಜರನ್‌ವಾಲಾದಲ್ಲಿ ನಡೆದ ಹಿಂಸಾಚಾರವು ಉದ್ದೇಶಪೂರಿತವಾಗಿದೆ. ಸಾರ್ವಜನಿಕರ ಭಾವನೆಗಳನ್ನು ಕೆರಳಿಸಿ ಶಾಂತಿ ಕದಡುವ ಯತ್ನ ನಡೆದಿದೆ. ಫೈಸಲಾಬಾದ್‌ನ ಪರಿಸ್ಥಿತಿಯು ಈಗ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ.
ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಘಟನೆಯ ತನಿಖೆ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಕಾನೂನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸುವವರನ್ನು ತಕ್ಷಣವೇ ಬಂಧಿಸಲಾಗುವುದು. ಚರ್ಚ್‌ಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ 6,000 ಕ್ಕೂ ಹೆಚ್ಚು ಪೊಲೀಸರು ಮತ್ತು ರೇಂಜರ್ಸ್ ಸಿಬ್ಬಂದಿ ಇದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈ ಮಧ್ಯೆ, ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಕ್ರಿಶ್ಚಿಯನ್ ಮುಖಂಡರು ಆರೋಪಿಸಿದ್ದಾರೆ.
ಚರ್ಚ್ ಆಫ್ ಪಾಕಿಸ್ತಾನದ ಅಧ್ಯಕ್ಷ ಬಿಷಪ್ ಆಜಾದ್ ಮಾರ್ಷಲ್, 'ಪವಿತ್ರ ಕುರಾನ್ ಉಲ್ಲಂಘಿಸಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಹೊರಿಸಿ ಬೈಬಲ್‌ಗಳನ್ನು ಅಪವಿತ್ರಗೊಳಿಸಲಾಗಿದೆ. ಕ್ರೈಸ್ತರಿಗೆ ಚಿತ್ರಹಿಂಸೆ ಮತ್ತು ಕಿರುಕುಳ ನೀಡಲಾಗುತ್ತಿದೆ. ಘಟನೆಯಿಂದ ಬಿಷಪ್‌ಗಳು, ಪಾದ್ರಿಗಳು ಹಾಗೂ ಕ್ರೈಸ್ತ ಧರ್ಮ ಅನುಯಾಯಿಗಳು ತೀವ್ರವಾಗಿ ನೊಂದಿದ್ದೇವೆ. ಪಾಕಿಸ್ತಾನದ ಫೈಸಲಾಬಾದ್ ಜಿಲ್ಲೆಯ ಜರನ್‌ವಾಲಾದಲ್ಲಿ ಇದ್ದ ಚರ್ಚ್ ಅನ್ನು ದಾಳಿಕೋರರು ಧ್ವಂಸಗೊಳಿಸಿ ಬೆಂಕಿ ಇಟ್ಟಿದ್ದಾರೆ' ಎಂದು ಅವರು ಎಕ್ಸ್ ಆಪ್ನಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ.