ಪಂಜಾಬ್ (ಪಾಕಿಸ್ತಾನ):ಧರ್ಮ ನಿಂದಿಸಿದ ಆರೋಪ ಹೊರಿಸಿದ ಉದ್ರಿಕ್ತ ಗುಂಪೊಂದು ಬೀಗ ಹಾಕಿದ್ದ ಪೊಲೀಸ್ ಠಾಣೆಯಿಂದ ವ್ಯಕ್ತಿಯೊಬ್ಬನನ್ನು ಎಳೆದೊಯ್ದು ಚಿತ್ರಹಿಂಸೆ ನೀಡಿ ಹತ್ಯೆಗೈದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವಿಡಿಯೋ ತುಣುಕುಗಳು ಹರಿದಾಡುತ್ತಿವೆ. ನೂರಾರು ಯುವಕರು ಪೊಲೀಸ್ ಠಾಣೆಯ ಕಾಂಪೌಂಡ್‌ಗೆ ಮುತ್ತಿಗೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಒಬ್ಬಾತ ಏಣಿ ಬಳಸಿ ಎತ್ತರದ ಗೇಟ್ ಹತ್ತಿ ನಂತರ ಠಾಣೆಯ ಬೀಗ ತೆರೆಯುತ್ತಾನೆ.
"ಪೊಲೀಸ್ ಠಾಣೆಯಲ್ಲಿ ಬಂಧಿಯಾಗಿದ್ದ ವ್ಯಕ್ತಿಯನ್ನು ಬೀದಿಗೆ ಎಳೆದು ತಂದು ಆತನ ಮೈಮೇಲಿನ ಬಟ್ಟೆಗಳನ್ನು ಕಿತ್ತೆಸೆದು ಥಳಿಸಲಾಗಿದೆ. ಘಟನೆ ನಡೆದಾಗ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಹೆಚ್‌ಒ) ವಾರ್ಬರ್ಟನ್ ಫಿರೋಜ್ ಭಟ್ಟಿ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಸ್ಥಳದಿಂದ ಪರಾರಿಯಾಗಿದ್ದರು" ಎಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ:ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದಲ್ಲ.. ಶೀಲ ಶಂಕಿಸಿ ಗಂಡನಿಂದಲೇ ಪತ್ನಿಯ ಹತ್ಯೆ
"ಮುಹಮ್ಮದ್ ವಾರಿಸ್ ಮೃತಪಟ್ಟ ವ್ಯಕ್ತಿ. ಧರ್ಮಗ್ರಂಥ ಕುರಾನ್ ಅಪವಿತ್ರಗೊಳಿಸಿದ ಆರೋಪದಡಿ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಕುರಿತಾದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಆಕ್ರೋಶಗೊಂಡ ನೂರಾರು ಜನ ಪೊಲೀಸ್ ಠಾಣೆಯನ್ನು ಸುತ್ತುವರೆದು ಆರೋಪಿಯನ್ನು ತಮಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಉದ್ರಿಕ್ತ ಗುಂಪನ್ನು ನೋಡಿದ ಪೊಲೀಸ್ ಸಿಬ್ಬಂದಿ ಠಾಣೆಯಿಂದ ಓಡಿಹೋದರು. ಬಳಿಕ ಪ್ರತಿಭಟನಾಕಾರರು ವ್ಯಕ್ತಿಯನ್ನು ಬೀದಿಗೆ ಎಳೆದು ತಂದರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪಾಕಿಸ್ತಾನದಲ್ಲಿ ಧರ್ಮನಿಂದನೆ ಆರೋಪಗಳ ಮೇಲೆ ಆಗಾಗ್ಗೆ ನಡೆಯುತ್ತಿರುವ ಇಂಥ ಹತ್ಯೆಗಳನ್ನು ತಡೆಯಲು ಪಾಕಿಸ್ತಾನದ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಹಕ್ಕುಗಳ ಗುಂಪುಗಳು ಟೀಕಿಸಿವೆ. ಪಾಕಿಸ್ತಾನದ ಕಾನೂನಿನಡಿಯಲ್ಲಿ ಧರ್ಮನಿಂದನೆ ಘೋರ ಅಪರಾಧವಾಗಿದ್ದು, ತಪ್ಪು ಸಾಬೀತಾದರೆ ಮರಣದಂಡನೆ ಶಿಕ್ಷೆಯನ್ನೂ ಸಹ ವಿಧಿಸಬಹುದು.
ಇದನ್ನೂ ಓದಿ:ದೇವನಹಳ್ಳಿ ಅಪರಿಚಿತ ಶವ ಪತ್ತೆ ಪ್ರಕರಣ : ಕತ್ತರಿಸಿದ ಬೆರಳು ಜೋಡಿಸಿ ಕೊಲೆ ಕೇಸ್ ಭೇದಿಸಿದ ವಿಜಯಪುರ ಪೊಲೀಸರು
ನಾಲ್ವರು ಯೋಧರ ಸಾವು: ಪಾಕಿಸ್ತಾನದ ಪ್ರಕ್ಷುಬ್ಧ ವಾಯುವ್ಯ ಪ್ರದೇಶದಲ್ಲಿ ಶನಿವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ವರು ಯೋಧರು ಸಾವಿಗೀಡಾಗಿದ್ದಾರೆ. ಪೆಟ್ರೋಲಿಯಂ ಕಂಪನಿಯೊಂದರ ನೌಕರರು ಸೇರಿದಂತೆ ಒಟ್ಟು 22 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಉತ್ತರ ವಜೀರಿಸ್ತಾನ್ ಬುಡಕಟ್ಟು ಜಿಲ್ಲೆಯ ಖಜೋರಿ ಚೌಕ್‌ನಲ್ಲಿ ಘಟನೆ ಸಂಭವಿಸಿದೆ. ಬಾಂಬ್ ತುಂಬಿದ್ದ ತ್ರಿಚಕ್ರ ವಾಹನದಲ್ಲಿ ಬಂದ ಆತ್ಮಹತ್ಯಾ ಬಾಂಬರ್, ಎಂಪಿಸಿಎಲ್ ಪೆಟ್ರೋಲಿಯಂ ಕಂಪನಿಯ ನೌಕರರನ್ನು ಬೆಂಗಾವಲು ಮಾಡುತ್ತಿದ್ದ ಭದ್ರತಾ ಪಡೆಗಳ ವಾಹನಕ್ಕೆ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿತ್ತು.