ಇಸ್ಲಾಮಾಬಾದ್:ಇರಾನ್ ಮೇಲೆ ಪಾಕಿಸ್ತಾನ ಗುರುವಾರ ಬೆಳಿಗ್ಗೆ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಮಕ್ಕಳು ಮತ್ತು ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಇರಾನಿನ ಸರ್ಕಾರಿ ಟೆಲಿವಿಷನ್‌ಗೆ ತಿಳಿಸಿದ್ದಾರೆ. ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದ ಡೆಪ್ಯುಟಿ ಗವರ್ನರ್ ಅಲಿ ರೆಜಾ ಮಹರ್ಮತಿ ದೂರವಾಣಿ ಸಂದರ್ಶನದಲ್ಲಿ ಸಾವಿನ ಅಂಕಿಅಂಶಗಳನ್ನು ನೀಡಿದರು. ಆದರೆ ತಕ್ಷಣಕ್ಕೆ ಮತ್ತಷ್ಟು ವಿವರಗಳನ್ನು ನೀಡಲು ಅವರು ನಿರಾಕರಿಸಿದರು.
ಬಲೂಚಿ ಉಗ್ರವಾದಿಗಳ ಗುಂಪು ಜೈಶ್ ಅಲ್-ಅದ್ಲ್‌ನ ಪಾಕಿಸ್ತಾನದಲ್ಲಿನ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿತ್ತು. ಇದರಿಂದ ಕೆರಳಿ ಕೆಂಡವಾಗಿದ್ದ ಪಾಕಿಸ್ತಾನ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಟೆಹ್ರಾನ್ಗೆ ಎಚ್ಚರಿಕೆ ನೀಡಿತ್ತು. ಇದಾಗಿ ಒಂದು ದಿನದ ನಂತರ ಗುರುವಾರ ಪಾಕಿಸ್ತಾನ ಇರಾನ್ನಲ್ಲಿನ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ಮಾಡಿದೆ.
"ಮಾರ್ಗ್ ಬಾರ್ ಸರ್ಮಾಚಾರ್" ಎಂಬ ಸಂಕೇತನಾಮದ ಗುಪ್ತಚರ ಆಧರಿತ ಕಾರ್ಯಾಚರಣೆಯಲ್ಲಿ ಹಲವಾರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದಾಗ್ಯೂ, ದಾಳಿಯಲ್ಲಿ ನಾಲ್ಕು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಮಾಧ್ಯಮಗಳಲ್ಲಿ ವರದಿಯಾಗಿದೆ.
"ಇಂದು ಬೆಳಿಗ್ಗೆ ಪಾಕಿಸ್ತಾನವು ಇರಾನ್ನ ಸಿಸ್ತಾನ್-ಒ-ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭಯೋತ್ಪಾದಕ ಅಡಗುತಾಣಗಳ ವಿರುದ್ಧ ನಿರ್ದಿಷ್ಟವಾಗಿ ಗುರಿಪಡಿಸಿದ ನಿಖರ ಮಿಲಿಟರಿ ದಾಳಿಗಳನ್ನು ನಡೆಸಿತು" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇರಾನ್ ಅನ್ನು ಸಹೋದರ ದೇಶ ಎಂದು ಕರೆದ ಇಸ್ಲಾಮಾಬಾದ್, ತನ್ನ ಈ ಕ್ರಮವು ತನ್ನ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ಪಾಕಿಸ್ತಾನದ ದೃಢ ಸಂಕಲ್ಪದ ಅಭಿವ್ಯಕ್ತಿಯಾಗಿದೆ ಎಂದು ಹೇಳಿದೆ.
"ಕಳೆದ ಹಲವಾರು ವರ್ಷಗಳಿಂದ ಇರಾನ್ನೊಂದಿಗೆ ನಡೆದ ಮಾತುಕತೆಗಳಲ್ಲಿ, ಆಡಳಿತವಿಲ್ಲದ ಇರಾನ್ನ ಪ್ರದೇಶಗಳಲ್ಲಿ 'ಸರ್ಮಾಚಾರ್' ಎಂದು ಕರೆದುಕೊಳ್ಳುವ ಪಾಕಿಸ್ತಾನ ಮೂಲದ ಭಯೋತ್ಪಾದಕರು ನೆಲೆಗಳನ್ನು ಸ್ಥಾಪಿಸಿರುವ ಬಗ್ಗೆ ಪಾಕಿಸ್ತಾನವು ನಿರಂತರವಾಗಿ ತನ್ನ ಗಂಭೀರ ಕಳವಳ ವ್ಯಕ್ತಪಡಿಸಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಭಯೋತ್ಪಾದಕರ ಉಪಸ್ಥಿತಿ ಮತ್ತು ಚಟುವಟಿಕೆಗಳ ಬಗ್ಗೆ ದೃಢವಾದ ಪುರಾವೆಗಳೊಂದಿಗೆ ಅನೇಕ ದಸ್ತಾವೇಜುಗಳನ್ನು ಇರಾನ್ನೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ಹೇಳಿದೆ. "ಆದಾಗ್ಯೂ, ನಮ್ಮ ಗಂಭೀರ ಕಾಳಜಿಗಳ ಬಗ್ಗೆ ಕ್ರಮ ಕೈಗೊಳ್ಳದ ಕಾರಣ ಇಂದು ಬೆಳಗ್ಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಅದು ತಿಳಿಸಿದೆ.
ಇದನ್ನೂ ಓದಿ: ಟ್ರಂಪ್ ಬೆಂಬಲಿಸಿ ಹ್ಯಾಲೆ, ಡಿಸಾಂಟಿಸ್ ಕಣದಿಂದ ಹಿಂದೆ ಸರಿಯಲಿ; ವಿವೇಕ್ ರಾಮಸ್ವಾಮಿ ಆಗ್ರಹ