ಇಸ್ಲಾಮಾಬಾದ್ (ಪಾಕಿಸ್ತಾನ) : ಬರುವ ಕೆಲ ತಿಂಗಳುಗಳಲ್ಲಿ ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ನಾಲ್ಕನೇ ಅತಿದೊಡ್ಡ ಸಾಲಗಾರ ರಾಷ್ಟ್ರವಾಗಲಿದೆ. ಮುಂದಿನ 9 ತಿಂಗಳ ಅವಧಿಯಲ್ಲಿ ಐಎಂಎಫ್ ಪಾಕಿಸ್ತಾನಕ್ಕೆ 3 ಶತಕೋಟಿ ಡಾಲರ್ ಸಾಲ ಮಂಜೂರು ಮಾಡಲಿದ್ದು, ಇದರ ನಂತರ ಪಾಕಿಸ್ತಾನ ವಿಶ್ವದ ಅತಿದೊಡ್ಡ ಸಾಲಗಾರ ರಾಷ್ಟ್ರಗಳಲ್ಲೊಂದಾಗಲಿದೆ.
1947ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನವು, ಜಾಗತಿಕ ಸಾಲದಾತರ ಡೇಟಾ ಪ್ರಕಾರ ಮಾರ್ಚ್ 31, 2023ರಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಅತಿ ಹೆಚ್ಚು ಸಾಲ ಪಡೆದ ದೇಶಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ, ಮುಂದಿನ 9 ತಿಂಗಳ ಅವಧಿಯಲ್ಲಿ ಮತ್ತೆ 3 ಶತಕೋಟಿ ಸಾಲ ಪಡೆಯುವ ಮೂಲಕ ಪಾಕಿಸ್ತಾನವು ಸಾಲಗಾರರರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲಿದೆ.
ಮತ್ತೆ 3 ಶತಕೋಟಿ ಡಾಲರ್ ಸಾಲ ನೀಡುವ ಒಪ್ಪಂದಕ್ಕೆ ಐಎಂಎಫ್ ಬೋರ್ಡ್ನ ಅನುಮತಿ ಇನ್ನಷ್ಟೇ ಸಿಗಬೇಕಿದೆ. ಈ ಸಾಲ 8 ತಿಂಗಳ ವಿಳಂಬದ ನಂತರ ಪಾಕಿಸ್ತಾನಕ್ಕೆ ಸಿಗುತ್ತಿದೆ. ಐಎಂಎಫ್ನಿಂದ ಸಾಲ ಪಡೆದ ದೇಶಗಳ ವಿಷಯ ನೋಡುವುದಾದರೆ, ಅರ್ಜೆಂಟೀನಾ 46 ಶತಕೋಟಿ ಡಾಲರ ಸಾಲದೊಂದಿಗೆ ಮೊದಲ ಸ್ಥಾನದಲ್ಲಿದೆ, ಈಜಿಪ್ಟ್ 18 ಶತಕೋಟಿ ಡಾಲರ್ನೊಂದಿಗೆ ಎರಡನೇ ಸ್ಥಾನದಲ್ಲಿದೆ, 12.2 ಶತಕೋಟಿ ಡಾಲರ್ನೊಂದಿಗೆ ಉಕ್ರೇನ್ ಮೂರನೇ ಸ್ಥಾನದಲ್ಲಿದೆ, 8.2 ಶತಕೋಟಿ ಡಾಲರ್ನೊಂದಿಗೆ ಈಕ್ವೆಡಾರ್ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. 7.4 ಶತಕೋಟಿ ಡಾಲರ್ಗಳೊಂದಿಗೆ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ. ಈಗ ಐಎಂಎಫ್ನಿಂದ ಒಟ್ಟು 10.4 ಶತಕೋಟಿ ಮೌಲ್ಯದ ಸಾಲ ಪಡೆಯುವ ಮೂಲಕ ಪಾಕಿಸ್ತಾನವು ಈಕ್ವೆಡಾರ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಐಎಂಎಫ್ ಸಾಲಗಾರನಾಗಲಿದೆ.