ಕರ್ನಾಟಕ

karnataka

ETV Bharat / international

ಪಾಕಿಸ್ತಾನ ಇಬ್ಭಾಗವಾದೀತು! ಮಾಜಿ ಪಿಎಂ ಇಮ್ರಾನ್ ಖಾನ್ ಎಚ್ಚರಿಕೆ - ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ವಿರುದ್ಧ ಆಡಳಿತಾರೂಢ ಮೈತ್ರಿಕೂಟವು ಸಂಚು ರೂಪಿಸಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.

Imran Khan warns of Pakistan's disintegration
Imran Khan warns of Pakistan's disintegration

By

Published : May 18, 2023, 1:13 PM IST

ಇಸ್ಲಾಮಾಬಾದ್ (ಪಾಕಿಸ್ತಾನ್): ದೇಶದ ಅತಿದೊಡ್ಡ ರಾಜಕೀಯ ಪಕ್ಷದ ವಿರುದ್ಧ ಸೇನೆಯನ್ನು ಎತ್ತಿಕಟ್ಟಲು ಮತ್ತು ಜನಸಾಮಾನ್ಯರಲ್ಲಿ ದ್ವೇಷವನ್ನು ಹರಡಲು ಪಾಕಿಸ್ತಾನದ ಆಡಳಿತಾರೂಢ ಮೈತ್ರಿಕೂಟ ಸಂಚು ರೂಪಿಸಿದೆ ಎಂದು ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಆರೋಪಿಸಿದ್ದು, ಇದರಿಂದ ದೇಶವು ಇಬ್ಭಾಗವಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

ದೇಶದ ಸಂವಿಧಾನ ಅಪವಿತ್ರಗೊಳ್ಳುವ ಬಗ್ಗೆ, ಸರ್ಕಾರಿ ಸಂಸ್ಥೆಗಳು ನಾಶವಾಗುವ ಬಗ್ಗೆ ಅಥವಾ ಪಾಕಿಸ್ತಾನದ ಸೇನೆಗೆ ಕೆಟ್ಟ ಹೆಸರು ಬರುವ ಬಗ್ಗೆ ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಪಿಡಿಎಂ (ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್) ನಾಯಕರು ಮತ್ತು ನವಾಜ್ ಷರೀಫ್​ರಿಗೆ ಯಾವುದೇ ಕಾಳಜಿ ಇಲ್ಲ. ಅವರು ಕೇವಲ ತಾವು ಲೂಟಿ ಮಾಡಿದ ಸಂಪತ್ತನ್ನು ಉಳಿಸಿಕೊಳ್ಳುವುದು ಹೇಗೆಂಬ ಬಗ್ಗೆ ತಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ಹುಡುಕುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕಿಡಿ ಕಾರಿದ್ದಾರೆ.

ದೇಶವು ಅತಿ ಸನಿಹದಲ್ಲೇ ಸಂಭಾವ್ಯ ವಿಪತ್ತಿನತ್ತ ಸಾಗುತ್ತಿದೆ ಎಂಬ ಭಯಾನಕ ಕನಸು ನನಗೆ ಕಾಣಿಸುತ್ತಿದೆ ಖಾನ್ ಹೇಳಿದ್ದಾರೆ. ಮೇ 9 ರಂದು ತಮ್ಮ ಬಂಧನದ ನಂತರ ದೇಶಾದ್ಯಂತ ಭುಗಿಲೆದ್ದ ಗಲಭೆಗಳ ಬಗ್ಗೆ ಮಾತನಾಡಿದ ಖಾನ್, ಇದು ಪಿಡಿಎಂ ಸರ್ಕಾರ ಮತ್ತು ಪಂಜಾಬ್ ಪ್ರಾಂತ್ಯದ ಉಸ್ತುವಾರಿ ಸರ್ಕಾರದ ಪರವಾಗಿ ರೂಪಿಸಲಾದ ಮತ್ತು ಕಾರ್ಯಗತಗೊಳಿಸಲಾದ ಪಿತೂರಿ ಎಂದು ಪ್ರತಿಪಾದಿಸಿದರು.

ತಮ್ಮ ತೆಹ್ರೀಕ್ ಎ ಇನ್ಸಾಫ್ ಪಕ್ಷವನ್ನು ಭಯೋತ್ಪಾದಕ ಪಕ್ಷವೆಂದು ಘೋಷಿಸಿದ ಸರ್ಕಾರವು ತಾನೇ ನ್ಯಾಯಾಲಯ, ತಾನೇ ನ್ಯಾಯಾಧೀಶ ಮತ್ತು ತಾನೇ ಪೊಲೀಸನಾಗಿ ಕೆಲಸ ಮಾಡುತ್ತಿದೆ. ಆಡಳಿತದಲ್ಲಿರುವ ಶಕ್ತಿಗಳು ಸಂವೇದನಾಶೀಲವಾಗಿ ಮರುಚಿಂತನೆ ಮಾಡಬೇಕಾದ ಸಮಯವಿದು. ಇಲ್ಲವಾದಲ್ಲಿ ದೇಶವು ಮತ್ತೊಮ್ಮೆ ಪೂರ್ವ ಪಾಕಿಸ್ತಾನದಂತಹ ಪರಿಸ್ಥಿತಿಯನ್ನು ಎದುರಿಸಬಹುದು ಎಂದು ಖಾನ್ ಆತಂಕ ವ್ಯಕ್ತಪಡಿಸಿದರು.

ಪಾಕಿಸ್ತಾನದ ಶೇ 70ರಷ್ಟು ಜನಸಂಖ್ಯೆಯು ಪಿಟಿಐ ಮತ್ತು ಉಳಿದ ಶೇ 30ರಷ್ಟು ಜನರು ಪಿಡಿಎಂ ಮೈತ್ರಿಕೂಟದ ಪರವಾಗಿದ್ದಾರೆ ಎಂಬುದನ್ನು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ ಎಂದು ಖಾನ್ ಹೇಳಿದ್ದಾರೆ. ರಾಜಕೀಯ ಅಸ್ಥಿರತೆ ಹೋಗಲಾಡಿಸಲು ಚುನಾವಣೆ ನಡೆಸುವುದೊಂದೇ ಪರಿಹಾರ, ಚುನಾವಣೆಗಳನ್ನು ನಡೆಸಲು ಮತ್ತು ದೇಶವನ್ನು ಉಳಿಸಲು ನಾನು ಆಡಳಿತದಲ್ಲಿರುವ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಖಾನ್ ಹೇಳಿದರು.

ತಾವು ತಮ್ಮ ರಾಜಕೀಯ ಜೀವನದುದ್ದಕ್ಕೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಪಾಕಿಸ್ತಾನ ಸೇನೆಯನ್ನು ಸಮರ್ಥಿಸಿಕೊಂಡಿದ್ದನ್ನು ಪ್ರತಿಪಾದಿಸಿದ ಖಾನ್, ನಾನು ಸೇನೆಯನ್ನು ಟೀಕಿಸಿದರೆ ಅದು ನಾನು ನನ್ನ ಮಕ್ಕಳನ್ನು ಟೀಕಿಸಿದಂತೆ ಎಂದಿದ್ದಾರೆ. ಸರ್ಕಾರಿ ಸಂಸ್ಥೆಗಳ ಆಂತರಿಕ ವಿಷಯಗಳಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಪದೇ ಪದೇ ಹೇಳಿದ್ದೇನೆ. ಮಾಜಿ ಸೇನಾ ಮುಖ್ಯಸ್ಥರು ನನ್ನ ವಿರುದ್ಧ ಪಿತೂರಿ ನಡೆಸುತ್ತಿರುವ ಬಗ್ಗೆ ಖಚಿತವಾದಾಗಲೂ ನಾನು ಮಧ್ಯ ಪ್ರವೇಶಿಸಲಿಲ್ಲ ಎಂದು ಅವರು ಹೇಳಿದರು. ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿರುವ ಮಧ್ಯದಲ್ಲಿಯೇ ರಾಜಕೀಯ ಬಿಕ್ಕಟ್ಟು ಸಹ ತಾರಕ್ಕೇರಿರುವುದರಿಂದ ದೇಶದಲ್ಲಿ ಅರಾಜಕ ಸ್ಥಿತಿ ನಿರ್ಮಾಣವಾಗುವ ಆತಂಕ ತಲೆದೋರಿದೆ.

ಇದನ್ನೂ ಓದಿ : 2ನೇ ತಿಂಗಳಿಗೆ ಕಾಲಿಟ್ಟ ಸುಡಾನ್ ಸಂಘರ್ಷ: ಮಾನವೀಯ ಬಿಕ್ಕಟ್ಟು ಉಲ್ಬಣ

ABOUT THE AUTHOR

...view details