ಕರ್ನಾಟಕ

karnataka

ETV Bharat / international

ಪಶ್ಚಿಮ ಏಷ್ಯಾದಲ್ಲಿ ಹೊಸ ಉದ್ವಿಗ್ನತೆ: ಪಾಕ್ - ಇರಾನ್ ಸಂಬಂಧ ಹಳಸಲು ಕಾರಣವೇನು ಗೊತ್ತಾ? - ಪಶ್ಚಿಮ ಏಷ್ಯಾದಲ್ಲಿ

Pakistan Iran Conflict Explained: ಪಾಕಿಸ್ತಾನ ಮತ್ತು ಇರಾನ್ ಕ್ರಮವಾಗಿ ದಕ್ಷಿಣ ಮತ್ತು ಪಶ್ಚಿಮ ಏಷ್ಯಾದ ಎರಡು ಸ್ನೇಹ ರಾಷ್ಟ್ರಗಳಾಗಿವೆ. ಉಭಯ ದೇಶಗಳ ಸಂಬಂಧಗಳು ಸ್ನೇಹಪರವಾಗಿವೆ. ಆದರೆ, ಐತಿಹಾಸಿಕ, ಭೌಗೋಳಿಕ, ಆರ್ಥಿಕ ಮತ್ತು ಧಾರ್ಮಿಕ ವಿಷಯಗಳಿಂದ ಇವುಗಳ ಸಂಬಂಧಗಳು ಹಳಸಿವೆ.

pakistan-iran-conflict-and-relation-explained-why-iran-attacked-pakistan
ಪಾಕ್ ಉಗ್ರ ನೆಲೆಗಳ ಇರಾನ್ ದಾಳಿ ಯಾಕೆ?; ಉಭಯ ದೇಶಗಳ ಸಂಬಂಧ ಹಳಸಲು ಇದೇ ಕಾರಣ!

By ETV Bharat Karnataka Team

Published : Jan 17, 2024, 9:58 PM IST

ಹೈದರಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಭಯೋತ್ಪಾದನಾ ನೆಲೆಗಳ ಇರಾನ್‌ ಕ್ಷಿಪಣಿ ಮತ್ತು ಡ್ರೋನ್‌ಗಳ ದಾಳಿಯು ಹೊಸ ಜಾಗತಿಕ ಬಿಕ್ಕಟ್ಟನ್ನು ಹುಟ್ಟುವ ಹಾಕುವ ಮುನ್ಸೂಚನೆ ನಡೆದಿದೆ. ಈಗಾಗಲೇ ಗಾಜಾದಲ್ಲಿ ಪ್ಯಾಲೆಸ್ಟೈನ್-ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಈಗ ಪಾಕಿಸ್ತಾನದ ಮೇಲೆ ಇರಾನ್ ವೈಮಾನಿಕ ದಾಳಿ ನಡೆಸಿರುವುದು ಇಡೀ ಪಶ್ಚಿಮ ಏಷ್ಯಾದಲ್ಲಿ ಹೊಸ ಉದ್ವಿಗ್ನತೆ ಹೆಚ್ಚಿಸಿದೆ.

ಇದೇ ತಿಂಗಳ ಆರಂಭದಲ್ಲಿ ಇರಾನ್​ನ ಕೆರ್ಮನ್ ನಗರದಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪು ನಡೆಸಿದ್ದ ಬಾಂಬ್ ದಾಳಿಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದರು. ಸೋಮವಾರದಂದು ತನ್ನ ಕೆಲವು ಅಧಿಕಾರಿಗಳು ಮತ್ತು ಸಹಚರರ ಹತ್ಯೆಗೆ ಪ್ರತೀಕಾರವಾಗಿ ಸಿರಿಯಾ ಮತ್ತು ಇರಾಕ್‌ನಲ್ಲಿನ ಭಯೋತ್ಪಾದಕ ನೆಲೆಯ ಇರಾನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಇದರ ಮರು ದಿನವೇ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಮೇಲೆ ದಾಳಿ ನಡೆಸಲಾಗಿದೆ.

ಗಾಜಾ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಇಸ್ರೇಲ್ ಮತ್ತು ಅಮೆರಿಕದ ಜೊತೆ ಪರೋಕ್ಷವಾಗಿ ಸಂಘರ್ಷದಲ್ಲಿ ತೊಡಗಿದೆ. ಇರಾನ್ ತನ್ನ ಪ್ರಾದೇಶಿಕ ಮಿತ್ರರಾಷ್ಟ್ರಗಳ ವಿರುದ್ಧದ ದಾಳಿ ಮತ್ತು ದೇಶೀಯ ಸಂಘರ್ಷದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ ಎಂದು ಹೇಳುತ್ತಿದೆ. ಸೋಮವಾರ ಇರಾನ್‌ನ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಪ್ರಕಾರ, ಗಂಭೀರ ಜಾಗತಿಕ ಬಿಕ್ಕಟ್ಟಿನಿಂದ ಹೆಚ್ಚು ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಇರಾನ್‌ ಅರಿತುಕೊಂಡಿದೆ. ಈ ಜಾಗತಿಕ ಬಿಕ್ಕಟ್ಟಿನ ದೃಷ್ಟಿಯಿಂದ ಇರಾನ್ ಪ್ರಾದೇಶಿಕ ಸಂಘರ್ಷವನ್ನು ನಿಯಂತ್ರಿಸಲು ಯೋಜಿತ ಅಪಾಯಗಳನ್ನು ತೆಗೆದುಕೊಳ್ಳುತ್ತಿದೆ.

ಅಮೆರಿಕದೊಂದಿಗೆ ಪಾಕ್​ ಸ್ನೇಹ - ಇರಾನ್ ಕೋಪ: ಪಾಕಿಸ್ತಾನ ಮತ್ತು ಇರಾನ್ ನಡುವಿನ ಭದ್ರತಾ ಹಂಚಿಕೆಯ ವಿಷಯ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಮತ್ತು ಸಹಕಾರ ಎರಡನ್ನೂ ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿವೆ. ಎರಡೂ ದೇಶಗಳು ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಹೋರಾಡಲು ಆಸಕ್ತಿ ತೋರಿಸುತ್ತಿವೆ. ಆದರೆ, ಅವುಗಳು ತಮ್ಮ ಮಿತಿಗಳನ್ನು ಹೊಂದಿವೆ. ಪಾಕಿಸ್ತಾನವು ಸುನ್ನಿ ಬಹುಸಂಖ್ಯಾತ ರಾಷ್ಟ್ರವಾಗಿದ್ದು, ಇರಾನ್ ಹೆಚ್ಚಿನ ಸಂಖ್ಯೆಯ ಶಿಯಾ ಮುಸ್ಲಿಮರನ್ನು ಹೊಂದಿದೆ.

ಆದಾಗ್ಯೂ, ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನ ಮತ್ತು ಇರಾನ್ ನಡುವೆ ವಾಣಿಜ್ಯ, ಇಂಧನ ಮತ್ತು ಮೂಲಸೌಕರ್ಯ ಹಾಗೂ ಪ್ರಾದೇಶಿಕ ಸ್ಥಿರತೆಯನ್ನು ಹೆಚ್ಚಿಸಲು ಹಲವು ಪ್ರಯತ್ನಗಳು ನಡೆದಿವೆ. ಆದರೆ, ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಘರ್ಷವು ಎಂದಿಗೂ ಇದನ್ನು ಪ್ರಗತಿ ಸಾಧಿಸುವ ಅವಕಾಶ ನೀಡಿಲ್ಲ. ಪಾಕಿಸ್ತಾನ ಹೆಚ್ಚಾಗಿ ಸೌದಿ ಅರೇಬಿಯಾದ ರಾಜತಾಂತ್ರಿಕ ಪ್ರಭಾವಕ್ಕೆ ಒಳಗಾಗಿದೆ. ಈ ಪ್ರಭಾವಕ್ಕೆ ಸಂಬಂಧಿಸಿದಂತೆ ಇರಾನ್ ಮತ್ತು ಸೌದಿ ಅರೇಬಿಯಾ ನಡುವೆ ಸಂಘರ್ಷಗಳು ಇದೆ.

ಇದಲ್ಲದೇ, ಎರಡು ದೇಶಗಳ ನಡುವೆ ಸಾಕಷ್ಟು ಧಾರ್ಮಿಕ ವ್ಯತ್ಯಾಸಗಳಿವೆ. ಇದು ಕೂಡ ಕೆಲವೊಮ್ಮೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದು ಪಾಕಿಸ್ತಾನದ ಮೇಲೂ ಪರಿಣಾಮ ಬೀರಿದೆ. ದೊಡ್ಡ ಜಾಗತಿಕ ಶಕ್ತಿಯಾದ ಅಮೆರಿಕದ ನಿರ್ಧಾರಗಳಿಂದ ಪಾಕಿಸ್ತಾನ ಮತ್ತು ಇರಾನ್ ನಡುವಿನ ಸಂಬಂಧಗಳು ಪ್ರಭಾವಿತವಾಗಿವೆ. ಅಮೆರಿಕದೊಂದಿಗೆ ಪಾಕ್​ ಸ್ನೇಹವು ಇರಾನ್​ ಕೋಪಕ್ಕೂ ಕಾರಣವಾಗಿದೆ.

ಪಾಕಿಸ್ತಾನ-ಇರಾನ್ ಸಂಬಂಧಗಳಿಗೆ ಹೊಸ ಸವಾಲು:ಆರ್ಥಿಕ ಬಿಕ್ಕಟ್ಟು ಮತ್ತು ಗಡಿ ಭದ್ರತೆಗೆ ಸಂಬಂಧಿಸಿದಂತೆ ಉದಾಹರಣೆಯಾಗಿ ಹೇಳುವುದಾದರೆ, ಇರಾನ್ ಪರಮಾಣು ಒಪ್ಪಂದ ಎಂದೂ ಕರೆಯಲ್ಪಡುವ ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA). ಇರಾನ್ ಪರಮಾಣು ಒಪ್ಪಂದವು 2015ರ ಜುಲೈನಲ್ಲಿ ನಡೆದಿತ್ತು. ಇದು ಇರಾನ್ ಮತ್ತು P5+1 (ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ರಷ್ಯಾ, ಫ್ರಾನ್ಸ್ ಮತ್ತು ಚೀನಾ ಜೊತೆಗೆ ಜರ್ಮನಿ) ನಡುವೆ ಸಹಿ ಹಾಕಲಾದ ಒಪ್ಪಂದವಾಗಿದೆ.

ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕುವುದಕ್ಕೆ ಬದಲಾಗಿ ತನ್ನ ಪರಮಾಣು ಕಾರ್ಯಕ್ರಮವನ್ನು ಸೀಮಿತಗೊಳಿಸುವ ಮೂಲಕ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯಲು ಒಪ್ಪಂದವನ್ನು ರೂಪಿಸಲಾಗಿತ್ತು. ಆದರೆ, 2018ರಲ್ಲಿ ಈ ಒಪ್ಪಂದದಿಂದ ಅಮೆರಿಕ ಏಕಪಕ್ಷೀಯವಾಗಿ ಹಿಂದೆ ಸರಿದಿತ್ತು. ಇದು ಇರಾನ್ ಮತ್ತು ಪಶ್ಚಿಮದ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಜೊತೆಗೆ ಪಾಕಿಸ್ತಾನ - ಇರಾನ್ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಏಕೆಂದರೆ ಪಾಕಿಸ್ತಾನ ತನ್ನ ಅಗತ್ಯಗಳಿಗಾಗಿ ಅಮೆರಿಕವನ್ನು ಹೆಚ್ಚಾಗಿ ಅವಲಂಬಿಸಿದೆ.

ವಾಸ್ತವವಾಗಿ ನುಡಿಗಳು ಮತ್ತು ಕ್ರಿಯೆಗಳ ನಡುವಿನ ವ್ಯತ್ಯಾಸವು ಎರಡು ದೇಶಗಳ ನಡುವಿನ ಸಂಬಂಧಗಳಲ್ಲಿ ಪ್ರಮುಖ ಗೋಡೆಯಾಗಿದೆ. ಪತ್ರಿಕಾಗೋಷ್ಠಿಗಳು ಮತ್ತು ರಾಜತಾಂತ್ರಿಕ ಹೇಳಿಕೆಗಳಲ್ಲಿ ಪಾಕಿಸ್ತಾನ ಮತ್ತು ಇರಾನ್ ಭಯೋತ್ಪಾದನೆ, ಮೂಲಭೂತವಾದ ಮತ್ತು ಅಫ್ಘಾನಿಸ್ತಾನದಲ್ಲಿನ ಅಸ್ಥಿರ ಪರಿಸ್ಥಿತಿಯ ಬಗ್ಗೆ ಸಾಮಾನ್ಯ ಕಳವಳಗಳನ್ನು ವ್ಯಕ್ತಪಡಿಸುತ್ತೇವೆ. ಆದಾಗ್ಯೂ, ಸಾಮಾನ್ಯ ಭದ್ರತಾ ಸಮಸ್ಯೆಗಳನ್ನು ಎದುರಿಸಲು ಉಭಯ ದೇಶಗಳ ನಡುವೆ ಸಮನ್ವಯ ಮತ್ತು ಗುಪ್ತಚರ ಹಂಚಿಕೆಯ ವಿಷಯ ಬಂದಾಗ, ಎರಡೂ ದೇಶಗಳು ಪರಸ್ಪರ ಹೆಚ್ಚು ಆಸಕ್ತಿ ತೋರುತ್ತಿಲ್ಲ.

ಜಾಗತಿಕ ರಾಜಕೀಯ ಬದಲಾವಣೆ, ಪಾಕಿಸ್ತಾನ - ಇರಾನ್ ಸಂಬಂಧ ಸಂಕೀರ್ಣ: ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ರಾಜಕೀಯ ಬದಲಾವಣೆಗಳ ದೃಷ್ಟಿಯಿಂದ ಪಾಕಿಸ್ತಾನ ಮತ್ತು ಇರಾನ್ ನಡುವಿನ ಸಂಬಂಧಗಳು ಹೆಚ್ಚು ಸಂಕೀರ್ಣವಾಗಿವೆ. ಗಾಜಾದಲ್ಲಿ ಹೊಸ ಸುತ್ತಿನ ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧವು ಇರಾನ್‌ಗೆ ಸವಾಲುಗಳನ್ನು ಹೆಚ್ಚಿಸಿದೆ. ಇದು ಮಧ್ಯಪ್ರಾಚ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧಗಳು ರಷ್ಯಾದೊಂದಿಗೆ ಐತಿಹಾಸಿಕ ಉದ್ವಿಗ್ನ ಸ್ಥಿತಿ ತಲುಪಿವೆ.

ಮತ್ತೊಂದೆಡೆ, ಆರ್ಥಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಪಾಕಿಸ್ತಾನವು ಅಮೆರಿಕ ಮತ್ತು ಸೌದಿ ಅರೇಬಿಯಾದೊಂದಿಗೆ ವ್ಯೂಹಾತ್ಮಕ ಮೈತ್ರಿಯನ್ನು ಉಳಿಸಿಕೊಳ್ಳಲು ಒತ್ತಾಯಿಸಲ್ಪಟ್ಟಿದೆ. ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಪಾಕಿಸ್ತಾನದ ಪರಿಸ್ಥಿತಿ ಎರಡು ದೋಣಿಗಳ ಮೇಲೆ ಕಾಲಿಟ್ಟು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವಂತಿದೆ. ಇದರ ಪರಿಣಾಮವು ಪಾಕಿಸ್ತಾನದ ಆಂತರಿಕ ಪ್ರದೇಶಗಳಲ್ಲಿ ಸರ್ಕಾರ ಮತ್ತು ಜನರ ನಡುವೆ ಹೆಚ್ಚುತ್ತಿರುವ ಅಂತರ ಮತ್ತು ಉದ್ವಿಗ್ನತೆಯ ರೂಪದಲ್ಲಿಯೂ ಕಂಡು ಬರುತ್ತದೆ.

2023ರಲ್ಲಿ ಇರಾನ್, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ತ್ರಿಕೋನ ಮಾತುಕತೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಅವಕಾಶವಿದೆ ಎಂದು ತೋರಿಸಿಕೊಂಡಿತ್ತು. ಸೌದಿ ಅರೇಬಿಯಾ ಮತ್ತು ಪಾಕಿಸ್ತಾನವು ಯಾವಾಗಲೂ ನಿಕಟ ಸಂಬಂಧವನ್ನು ಹೊಂದಿದ್ದು, ಇರಾನ್ ಸೌದಿ ಅರೇಬಿಯಾವನ್ನು ಶತ್ರುವಾಗಿ ನೋಡುತ್ತದೆ. ಮೂರು ದೇಶಗಳ ನಡುವಿನ ಮಾತುಕತೆ ಮತ್ತು ಉತ್ತಮ ಸಂಬಂಧಗಳ ಮರುಸ್ಥಾಪನೆಯಿಂದ ಪಾಕಿಸ್ತಾನಕ್ಕೆ ಹೆಚ್ಚಿನ ಲಾಭವಾಗುತ್ತಿತ್ತು.

ಆದರೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದೊಂದಿಗೆ ಇರಾನ್‌ನ ಭಿನ್ನಾಭಿಪ್ರಾಯಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ಭಯೋತ್ಪಾದಕರ ಗಡಿಯಾಚೆಗಿನ ಚಲನೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಅಕ್ರಮ ವಲಸಿಗರ ಪ್ರವೇಶದಿಂದಾಗಿ ಇರಾನ್ ಸಮಸ್ಯೆಗಳನ್ನು ಎದುರಿಸಲಾರಂಭಿಸಿತು. ಮತ್ತೊಂದೆಡೆ, ಈ ಸಮಯದಲ್ಲಿ ಪಾಕಿಸ್ತಾನವು ತಾಲಿಬಾನ್ ಜೊತೆ ದ್ವೇಷ ಸಾಧಿಸುವ ಸ್ಥಿತಿಯಲ್ಲಿಲ್ಲ. ಅಫ್ಘಾನಿಸ್ತಾನದ ವಿಷಯದಲ್ಲಿ ಪಾಕಿಸ್ತಾನ ಮತ್ತು ಇರಾನ್ ನಡುವಿನ ಧೋರಣೆಯ ವ್ಯತ್ಯಾಸವು ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಿದೆ.

ತಾಲಿಬಾನ್​ನಿಂದ ಇರಾನ್‌ನ ಆಂತರಿಕ ಸಮಸ್ಯೆ:ಕಳೆದ ಕೆಲವು ವರ್ಷಗಳಲ್ಲಿ ಪಾಕಿಸ್ತಾನಿ ಸೇನೆ ಮತ್ತು ಸರ್ಕಾರ ತಾಲಿಬಾನ್‌ಗೆ ಸಹಾಯ ಮಾಡಿರುವುದು ಈಗ ರಹಸ್ಯವಾಗಿಲ್ಲ. ಅಫ್ಘಾನಿಸ್ತಾನವನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ಪಾಕಿಸ್ತಾನವು ತಾಲಿಬಾನ್‌ಗೆ ಸಹಾಯ ಮಾಡಿದ್ದು ಮಾತ್ರವಲ್ಲದೇ, ಪಾಕಿಸ್ತಾನದ ಸೇನೆಯು ಆಕ್ರಮಣವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಉಪಸ್ಥಿತಿಯಿಂದಾಗಿ ಇರಾನ್‌ನ ಆಂತರಿಕ ಸಮಸ್ಯೆಗಳು ಹೆಚ್ಚಾಗಿವೆ.

ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಗಡಿಯೊಳಗೆ ಅಕ್ರಮ ವಲಸಿಗರ ಪ್ರವೇಶ, ಜೊತೆಗೆ ಭಯೋತ್ಪಾದಕ ಘಟನೆಗಳು ಹೆಚ್ಚಾಗಿವೆ. ಇದು ತಾಲಿಬಾನ್‌ನಿಂದಾಗಿ ಇರಾನ್ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ. ಈಗ ಪಾಕಿಸ್ತಾನಕ್ಕೆ ಸಮಸ್ಯೆ ಏನೆಂದರೆ, ಅದು ತಾಲಿಬಾನ್‌ಗಳನ್ನು ಎದುರು ಹಾಕಿಕೊಳ್ಳುವಂತಿಲ್ಲ ಅಥವಾ ಇರಾನ್‌ನಿಂದ ದೂರ ಹೋಗುವಂತಿಲ್ಲ. ಆದಾಗ್ಯೂ, ಕಾಲಕಾಲಕ್ಕೆ ಈ ವಿಷಯಗಳ ಬಗ್ಗೆ ಪಾಕಿಸ್ತಾನ ಮತ್ತು ಇರಾನ್ ನಡುವೆ ಚರ್ಚೆಗಳು ನಡೆದಿವೆ. ಆದರೆ, ಅವು ಯಾವುದೇ ಮಹತ್ವದ ಫಲಿತಾಂಶವನ್ನು ನೀಡಲಿಲ್ಲ.

ಬಲೂಚಿಸ್ತಾನದ ಆಯಕಟ್ಟಿನ ಸ್ಥಾನವು ಪಾಕಿಸ್ತಾನ ಮತ್ತು ಇರಾನ್ ನಡುವಿನ ಸಂಬಂಧಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಬಲೂಚಿಸ್ತಾನದ ಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಸುನ್ನಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇರಾನ್ ಪಾಕಿಸ್ತಾನಕ್ಕೆ ಆಗಾಗ್ಗೆ ಒತ್ತಾಯಿಸುತ್ತಿದೆ. ಈ ಪ್ರದೇಶದಲ್ಲಿ ಹಲವು ಉಗ್ರಗಾಮಿ ಮತ್ತು ಪ್ರತ್ಯೇಕತಾವಾದಿ ಗುಂಪುಗಳ ಚಟುವಟಿಕೆ ಮುಂದುವರಿದಿದೆ ಎಂದು ಇರಾನ್ ಆರೋಪಿಸಿದೆ. ಇದರ ಪರಿಣಾಮವಾಗಿ ಇರಾನ್‌ನಲ್ಲಿ ಭಯೋತ್ಪಾದಕ ಘಟನೆಗಳು ನಡೆಯುತ್ತಿವೆ. ಆದರೆ, ಪಾಕಿಸ್ತಾನವು ಈ ಆರೋಪಗಳನ್ನು ತಳ್ಳಿಹಾಕುತ್ತಿದೆ. ಇದಕ್ಕೆ ವಿರುದ್ಧವಾಗಿ ಪಾಕಿಸ್ತಾನದಲ್ಲಿ ಶಿಯಾ ಭಯೋತ್ಪಾದಕ ಸಂಘಟನೆಗಳು ಉಗ್ರ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದು ಆರೋಪಿಸುತ್ತಿದೆ.

ಇದನ್ನೂ ಓದಿ:ಬಲೂಚಿಸ್ತಾನ್ ಉಗ್ರ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ - ಡ್ರೋನ್‌ಗಳ ದಾಳಿ: ರಾಯಭಾರಿ ಹಿಂದಕ್ಕೆ ಕರೆಯಿಸಿಕೊಂಡ ಪಾಕ್

ABOUT THE AUTHOR

...view details