ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ಪಕ್ಷಗಳ ಚಿಹ್ನೆಗಳ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಬ್ಯಾಟ್ ಚಿಹ್ನೆ ಕಾಣೆಯಾಗಿದೆ. ಪಾಕಿಸ್ತಾನದ ಚುನಾವಣಾ ಆಯೋಗವು ಪಿಟಿಐ ಪಕ್ಷವನ್ನು ಈ ಪಟ್ಟಿಯಿಂದ ಹೊರಗಿಟ್ಟಿದೆ.
ಪಕ್ಷ ಹಾಗೂ ನಾಯಕರ ವಿರುದ್ಧದ ಹಲವಾರು ಮೊಕದ್ದಮೆಗಳು ಮತ್ತು ಅನೇಕ ರಾಜಕೀಯ ಪಕ್ಷಗಳ ಮಧ್ಯೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಇಮ್ರಾನ್ ಖಾನ್ ಅವರ ಪಕ್ಷಕ್ಕೆ ಆಯೋಗದ ಈ ಕ್ರಮ ನುಂಗಲಾರದ ತುತ್ತಾಗಿದೆ.
ಮಂಗಳವಾರ, ಚುನಾವಣಾ ಆಯೋಗವು ಕನಿಷ್ಠ 145 ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆಗಳ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ಕಳುಹಿಸಿದೆ. ಆದರೆ ಈ ಪಟ್ಟಿಯಲ್ಲಿ ಪಿಟಿಐನ 'ಬ್ಯಾಟ್' ಚಿಹ್ನೆ ಕಾಣೆಯಾಗಿದೆ. ರಾಜಕೀಯ ಪಕ್ಷಗಳು ನಾಮನಿರ್ದೇಶನ ಮಾಡಿದ ಅಭ್ಯರ್ಥಿಗಳಿಗೆ ಆಯಾ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡಬೇಕು ಎಂದು ಚುನಾವಣಾ ಆಯೋಗವು ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಆಂತರಿಕ ಚುನಾವಣೆಗಳನ್ನು ನಡೆಸದ ಕಾರಣ ಕೆಲ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ತಡೆ ಹಿಡಿಯಲಾಗಿದೆ ಎಂದು ಪಾಕಿಸ್ತಾನ ಚುನಾವಣಾ ಆಯೋಗದ ಮೂಲಗಳು ದೃಢಪಡಿಸಿವೆ. ಇದಲ್ಲದೇ, ಮುಂಬರುವ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದರ ವಿರುದ್ಧದ ಮೇಲ್ಮನವಿಗಳ ವಿಚಾರಣೆಯ ಪ್ರಕ್ರಿಯೆಯನ್ನು ಮೇಲ್ಮನವಿ ನ್ಯಾಯಮಂಡಳಿಗಳು ಪೂರ್ಣಗೊಳಿಸುವ ನಿರೀಕ್ಷೆಯಿದೆ.