ಕರಾಚಿ(ಪಾಕಿಸ್ತಾನ):ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಪೂಜಾ ಮಂದಿರವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ದೇವಾಲಯದೊಳಗಿದ್ದ ವಿಗ್ರಹವನ್ನು ಅಪವಿತ್ರಗೊಳಿಸಲಾಗಿದೆ. ಸಿಂಧ್ ಪ್ರಾಂತ್ಯದಲ್ಲಿರುವ ಕರಾಚಿಯಲ್ಲಿ ಘಟನೆ ನಡೆದಿದೆ.
ಹಿಂದೂ ಅರ್ಚಕರು ನೆಲೆಸಿರುವ ಪ್ರದೇಶದಲ್ಲಿ ಶ್ರೀ ಮಾರಿ ಮಾತಾ ಮಂದಿರವಿದ್ದು, ಇದರ ಮೇಲೆ ಬುಧವಾರ ತಡರಾತ್ರಿ ದಾಳಿ ನಡೆದಿದೆ. ಪರಿಣಾಮ, ಅಲ್ಲಿ ವಾಸವಾಗಿರುವ ಹಿಂದೂಗಳಲ್ಲಿ ಮತ್ತಷ್ಟು ಭಯ, ಆತಂಕ ಶುರುವಾಗಿದೆ. ಭಯೋತ್ಪಾದಕರ ಗುಂಪು ಅರ್ಚಕರ ಮನೆಯ ಮೇಲೂ ದಾಳಿ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಆರೋಪಿಗಳ ಬಂಧನವಾಗಿಲ್ಲ.
ಇದನ್ನೂ ಓದಿ:ಪಬ್ಜಿ ಚಟಕ್ಕೆ ಹೆತ್ತಮ್ಮನ ಕೊಲೆ: ಶವ ವಿಲೇವಾರಿಗೆ ಸ್ನೇಹಿತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಮಗ!
ನಿರ್ಮಾಣ ಹಂತದ ದೇವಾಲಯ ಇದಾಗಿದ್ದು, ವಿಗ್ರಹ ಪ್ರತಿಷ್ಠಾಪನೆ ಮಾಡಲು ಕಳೆದ ಕೆಲವು ದಿನಗಳ ಹಿಂದೆ ಮೂರ್ತಿಯನ್ನು ತರಲಾಗಿತ್ತು. ಈ ಬೆನ್ನಲ್ಲೇ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿ ನೀಡಿರುವ ಮಾಹಿತಿ ಪ್ರಕಾರ, ದ್ವಿಚಕ್ರ ವಾಹನದಲ್ಲಿ ಆಗಮಿಸಿದ 6-8 ಮಂದಿ ದೇವಸ್ಥಾನ ಧ್ವಂಸಗೊಳಿಸಿ, ವಿಗ್ರಹ ಅಪವಿತ್ರಗೊಳಿಸಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.
ಪಾಕಿಸ್ತಾನದಲ್ಲಿ ಈ ಹಿಂದಿನಿಂದಲೂ ಅಲ್ಪಸಂಖ್ಯಾತ ದೇವಾಲಯಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಸಿಂಧ್ನಲ್ಲಿರುವ ಐತಿಹಾಸಿಕ ದೇವಾಲಯದ ಮೇಲೆ ದಾಳಿ ಮಾಡಿ, ಧ್ವಂಸಗೊಳಿಸಲಾಗಿತ್ತು. ಈ ಘಟನಾವಳಿಗಳ ಹಿನ್ನೆಲೆಯಲ್ಲಿ ಮಹಿಳೆಯರು, ಮಕ್ಕಳು ಭಯದಲ್ಲೇ ಜೀವನ ನಡೆಸುತ್ತಿದ್ದಾರೆ. ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಹುಡುಗಿಯರನ್ನು ಬಲವಂತವಾಗಿ ಮತಾಂತರಿಸುವ ಘಟನೆಗಳು ಕೂಡಾ ಎಗ್ಗಿಲ್ಲದೆ ನಡೆಯುತ್ತಿವೆ.