ಪೇಶಾವರ್ (ಪಾಕಿಸ್ತಾನ): ಸರ್ಕಾರದೊಂದಿಗೆ ಮಾತುಕತೆಗಳನ್ನು ಪುನಾರಂಭಿಸುವ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ (TTP) ಭಯೋತ್ಪಾದಕ ಸಂಘಟನೆಯ ಪ್ರಸ್ತಾವನೆಯನ್ನು ಪಾಕಿಸ್ತಾನ ಸರ್ಕಾರ ತಿರಸ್ಕರಿಸಿದೆ. ಟಿಟಿಪಿಯೊಂದಿಗೆ ಹಿಂದೆ ನಡೆಸಲಾದ ಮಾತುಕತೆಗಳ ಸಮಯದಲ್ಲಿ ಆದ ನಕಾರಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ಹೇಳಲಾಗಿದೆ. ಟಿಟಿಪಿ ತನ್ನ ವಿವಿಧ ಮೂಲಗಳು ಮತ್ತು ವೈಯಕ್ತಿಕ ಸಂಪರ್ಕಗಳ ಮೂಲಕ ಇತ್ತೀಚಿನ ದಿನಗಳಲ್ಲಿ ಮಾತುಕತೆಯಲ್ಲಿ ಮರು ತೊಡಗಿಸಿಕೊಳ್ಳಲು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದೆ. ಆದಾಗ್ಯೂ ಸರ್ಕಾರ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಉಗ್ರಗಾಮಿಗಳು ಶರಣಾಗುವಂತೆ ಸೂಚಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದೆ.
ಕಾಬೂಲ್‌ನಲ್ಲಿನ ಅಫ್ಘಾನ್ ತಾಲಿಬಾನ್ ಸರ್ಕಾರದ ಒತ್ತಾಯದ ಮೇರೆಗೆ ಪಾಕಿಸ್ತಾನದ ಸರ್ಕಾರವು ಕಳೆದ ವರ್ಷ ನಿಷೇಧಿತ ಟಿಟಿಪಿಯೊಂದಿಗೆ ಮಾತುಕತೆಯಲ್ಲಿ ತೊಡಗಿತ್ತು. ಮಾತುಕತೆಯ ಪರಿಣಾಮವಾಗಿ ಕದನ ವಿರಾಮವನ್ನೂ ಘೋಷಿಸಲಾಯಿತು. ಆದಾಗ್ಯೂ ಪಾಕಿಸ್ತಾನದ ಹೊಸ ಸೇನಾ ಮುಖ್ಯಸ್ಥರಾಗಿ ಜನರಲ್ ಅಸಿಮ್ ಮುನೀರ್ ಅವರನ್ನು ನೇಮಿಸುವ ಕೆಲವೇ ದಿನಗಳ ಮೊದಲು ಟಿಟಿಪಿ ಕಳೆದ ವರ್ಷ ನವೆಂಬರ್‌ನಲ್ಲಿ ಏಕಪಕ್ಷೀಯವಾಗಿ ಕದನ ವಿರಾಮವನ್ನು ಕೊನೆಗೊಳಿಸಿತು.
ಕದನ ವಿರಾಮದ ಅಂತ್ಯದ ನಂತರ ಖೈಬರ್ ಪಖ್ತುನಖ್ವಾದ ದಕ್ಷಿಣ ಜಿಲ್ಲೆಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡು ಪೊಲೀಸರು, ಭದ್ರತಾ ಸಿಬ್ಬಂದಿ ಮತ್ತು ಸರ್ಕಾರಿ ಕಚೇರಿಗಳ ಮೇಲೆ ಟಿಟಿಪಿ ಬಾಂಬ್ ದಾಳಿಗಳನ್ನು ನಡೆಸಲಾರಂಭಿಸಿತು. ಹಿಂದಿನ ಸುತ್ತಿನ ಮಾತುಕತೆಗಳಲ್ಲಿ ಅಫ್ಘಾನಿಸ್ತಾನದ ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಆದಾಗ್ಯೂ ಆ ಚರ್ಚೆಗಳಲ್ಲಿ ಅವರು ಯಾವುದೇ ಖಚಿತ ಫಲಿತಾಂಶ ಒದಗಿಸುವ ಪಾತ್ರವನ್ನು ಹೊಂದಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.