ಇಸ್ಲಾಮಾಬಾದ್ (ಪಾಕಿಸ್ತಾನ):ಪಾಕಿಸ್ತಾನದಲ್ಲಿ ಪ್ರವಾಹ ತಾಂಡವ ಮುಂದುವರಿದಿದೆ. ಈವರೆಗೂ 1,033 ಜನರು ವಿವಿಧ ವರ್ಷಧಾರೆಯ ಅನಾಹುತಗಳಿಗೆ ಸಾವಿಗೀಡಾದರೆ, 1,517 ಜನರು ಗಾಯಗೊಂಡಿದ್ದಾರೆ. ಲಕ್ಷಾಂತರ ಜನರಿ ನಿರ್ವಸಿತರಾಗಿದ್ದು, ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಜೊತೆಗೆ ಆಗಸ್ಟ್ 30 ರವರೆಗೆ ಅಲ್ಲಿನ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ಕಳೆದ 24 ಗಂಟೆಗಳಲ್ಲಿ 119 ಮಂದಿ ದೇಶದ ವಿವಿಧೆಡೆ ಅಸುನೀಗಿದ್ದಾರೆ. 71 ಮಂದಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನದಲ್ಲಿ ನಾಲ್ವರು, ಗಿಲ್ಗಿಟ್ ಬಾಲ್ಟಿಸ್ತಾನ್‌ನಲ್ಲಿ 6, ಖೈಬರ್ ಪಖ್ತುಂಖ್ವಾದಲ್ಲಿ 31 ಮತ್ತು ಸಿಂಧ್‌ನಲ್ಲಿ 76 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ದೇಶಾದ್ಯಂತ ಜೂನ್ 14 ರಿಂದ 3,451 ಕಿಮೀ ರಸ್ತೆ ಪ್ರವಾಹದ ನೀರಿಗೆ ಕೊಚ್ಚಿ ಹೋಗಿದೆ. 149 ಸೇತುವೆಗಳು ಕುಸಿದು ಬಿದ್ದಿವೆ. 170 ವಾಣಿಜ್ಯ ಅಂಗಡಿಗಳು, 949,858 ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ನಾಶವಾಗಿವೆ. 719,558 ಜಾನುವಾರುಗಳನ್ನು ಪ್ರವಾಹ ಆಹುತಿ ಪಡೆದಿದೆ.
ಕನಿಷ್ಠ 110 ಜಿಲ್ಲೆಗಳಲ್ಲಿ ಮಳೆಯ ರೌದ್ರಾವತಾರದಿಂದ ಭೀಕರ ಪ್ರವಾಹ ಉಂಟಾಗಿದೆ. ಅವುಗಳಲ್ಲಿ 72 ಜಿಲ್ಲೆಗಳು ತೀವ್ರ ವಿಪತ್ತಿಗೆ ಒಳಗಾಗಿವೆ. ಕಳೆದೊಂದು ದಶಕದಲ್ಲಿಯೇ ಆ ದೇಶ ಭೀಕರ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. 5,773,063 ಜನರು ಪ್ರವಾಹಕ್ಕೀಡಾಗಿದ್ದಾರೆ. ಇದರಿಂದ ಸರ್ಕಾರ ರಾಷ್ಟ್ರೀಯ ತುರ್ತುಸ್ಥಿತಿ ತಿಳಿಸಿದೆ. ಮಳೆ, ಪ್ರವಾಹದಲ್ಲಿ ಸಿಲುಕಿದ 51,275 ಮಂದಿಯನ್ನು ರಕ್ಷಿಸಲಾಗಿದೆ. 498,442 ಮಂದಿಯನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ತಿಳಿಸಿದೆ.
ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ದೇಶದಲ್ಲಿ 30 ವರ್ಷಗಳಲ್ಲಿ ಸರಾಸರಿ 134 ಮಿಮೀ ಮಳೆಯಾಗಿದೆ. ಈ ವರ್ಷ ಅದು 388.7 ಮಿಮೀ ಮಳೆ ಸುರಿದಿದೆ. ಇದು ಸರಾಸರಿಗಿಂತ 190.07% ಅಂದರೆ 2.87 ಪಟ್ಟು ಹೆಚ್ಚಾಗಿದೆ. ಇದರಿಂದ ಬಲೂಚಿಸ್ತಾನ್, ಸಿಂಧ್ ಮತ್ತು ಪಂಜಾಬ್‌ನ ಹಲವು ಭಾಗಗಳು ಭಾರಿ ಪ್ರವಾಹಕ್ಕೀಡಾಗಿವೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ವರುಣನ ಆರ್ಭಟ : 937 ಜನರ ಸಾವು, ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ