ಖೈಬರ್ ಪಖ್ತುನಖ್ವಾ (ಪಾಕಿಸ್ತಾನ): ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸಮಾ ಟಿವಿ ವರದಿ ಮಾಡಿದೆ. ಖೈಬರ್ ಪಖ್ತುನಖ್ವಾದ ಡೇರಾ ಇಸ್ಮಾಯಿಲ್ ಖಾನ್ ಪ್ರದೇಶದ ಪೊಂಡಾ ಬಜಾರ್ನ ಟ್ಯಾಂಕ್ ಅಡ್ಡಾದಲ್ಲಿ ಈ ಸ್ಫೋಟ ಸಂಭವಿಸಿದೆ. ಗಾಯಾಳುಗಳ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.
ಆರಂಭಿಕ ಮಾಧ್ಯಮ ವರದಿಗಳ ಪ್ರಕಾರ, ಸ್ಫೋಟಕವನ್ನು ಮೋಟಾರು ಬೈಕಿನಲ್ಲಿ ಇರಿಸಲಾಗಿತ್ತು. ಘಟನೆಯ ಸ್ಥಳದಲ್ಲಿ ದೊಡ್ಡ ಸ್ಪೋಟದ ಸದ್ದು ಕೇಳಿಸಿತು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸಮಾ ಟಿವಿ ವರದಿ ಮಾಡಿದೆ. ಸ್ಫೋಟದ ನಂತರ ಕೆಪಿ ಬಾಂಬ್ ನಿಷ್ಕ್ರಿಯ ಘಟಕ ಮತ್ತು ಕಾನೂನು ಜಾರಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಸ್ಫೋಟ ಸಂಭವಿಸಿದ ಡೇರಾ ಇಸ್ಮಾಯಿಲ್ ಖಾನ್ ನಗರವು ಅಫ್ಘಾನಿಸ್ತಾನದ ಗಡಿಯಲ್ಲಿದ್ದು, ಇದು ದೀರ್ಘಕಾಲದಿಂದ ದೇಶೀಯ ಮತ್ತು ವಿದೇಶಿ ಇಸ್ಲಾಮಿಕ್ ಉಗ್ರಗಾಮಿಗಳಿಗೆ ನೆಲೆಯಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸರ್ಕಾರದೊಂದಿಗಿನ ಕದನ ವಿರಾಮವನ್ನು ಕೊನೆಗೊಳಿಸಿದ ನಂತರ ಇತ್ತೀಚಿನ ತಿಂಗಳುಗಳಲ್ಲಿ, ವಿಶೇಷವಾಗಿ ಕೆಪಿ ಮತ್ತು ಬಲೂಚಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.