ಇಸ್ಲಾಮಾಬಾದ್ :ಸರಕಾರದ ಗಡಿಪಾರು ಕಾರ್ಯಾಚರಣೆಯ ಭಾಗವಾಗಿ ಈಗಾಗಲೇ 5,00,000ಕ್ಕೂ ಅಧಿಕ ಅಕ್ರಮ ವಲಸಿಗರನ್ನು ದೇಶದಿಂದ ವಾಪಸ್ ಕಳುಹಿಸಲಾಗಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವಾಲಯ ಸೆನೆಟ್ ಅಥವಾ ಸಂಸತ್ತಿನ ಮೇಲ್ಮನೆಗೆ ಮಾಹಿತಿ ನೀಡಿದೆ. ವಾಪಸಾತಿ ಮತ್ತು ಗಡೀಪಾರು ಅಭಿಯಾನದ ಪ್ರಸ್ತುತ ಸ್ಥಿತಿಯ ಬಗ್ಗೆ ಸೆನೆಟರ್ ಮೊಹ್ಸಿನ್ ಅಜೀಜ್ ಎತ್ತಿದ ಪ್ರಶ್ನೆಗಳಿಗೆ ಸಚಿವಾಲಯ ಉತ್ತರಿಸಿದೆ.
"ಸುಮಾರು 1.7 ಮಿಲಿಯನ್ ಅಕ್ರಮ ವಲಸಿಗರು ದೇಶದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಅಫ್ಘಾನಿಸ್ತಾನದವರು. ನಮ್ಮ ದೇಶದಲ್ಲಿ ವಾಸಿಸಲು ಅಗತ್ಯವಾದ ಯಾವುದೇ ಕಾನೂನಾತ್ಮಕ ದಾಖಲೆಗಳಿಲ್ಲದೆ ಅವರು ಇಲ್ಲಿದ್ದಾರೆ. ಅಕ್ರಮ ನಿವಾಸಿಗಳ ಗಡಿಪಾರು ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದ ನಂತರ ಸರಿಸುಮಾರು 5,41,210 ಜನರನ್ನು ವಾಪಸ್ ಕಳುಹಿಸಲಾಗಿದೆ" ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ಇನ್ನೂ 1.15 ಮಿಲಿಯನ್ ಅಕ್ರಮ ವಲಸಿಗರು ದೇಶದಲ್ಲಿ ನೆಲೆಸಿದ್ದಾರೆ. ಇವರನ್ನು ಸರ್ಕಾರದ ರಾಷ್ಟ್ರವ್ಯಾಪಿ ಗಡೀಪಾರು ಅಭಿಯಾನದ ಭಾಗವಾಗಿ ಸ್ವದೇಶಕ್ಕೆ ಕಳುಹಿಸಲಾಗುವುದು ಎಂದು ಅದು ಹೇಳಿದೆ. "ಉಳಿದವರನ್ನು ಗುರುತಿಸಿ ಗಡಿಪಾರು ಮಾಡುವ ಪ್ರಯತ್ನಗಳು ನಡೆಯುತ್ತಿವೆ. 5,00,000 ಅಕ್ರಮ ವಲಸಿಗರ ಪೈಕಿ ಶೇಕಡಾ 95 ಕ್ಕೂ ಹೆಚ್ಚು ಅಫ್ಘಾನ್ ಪ್ರಜೆಗಳಿದ್ದಾರೆ" ಎಂದು ಮೂಲಗಳು ದೃಢಪಡಿಸಿವೆ.