ಇಸ್ಲಾಮಾಬಾದ್ (ಪಾಕಿಸ್ತಾನ) :ಪಾಕಿಸ್ತಾನದಲ್ಲಿ ಚುನಾವಣಾ ದಿನಾಂಕಗಳು ಹತ್ತಿರವಾಗುತ್ತಿದ್ದಂತೆಯೇ ದೇಶದ ಚುನಾವಣಾ ಆಯೋಗವು ಸಿದ್ಧತೆಗಳನ್ನು ಪ್ರಾರಂಭಿಸಿದೆ. ರಾಷ್ಟ್ರೀಯ ಅಸೆಂಬ್ಲಿ ಜೊತೆಗೆ ಸಿಂಧ್ ಮತ್ತು ಬಲೂಚಿಸ್ತಾನದ ಪ್ರಾಂತೀಯ ಅಸೆಂಬ್ಲಿಗಳ ಅವಧಿ ಮುಂದಿನ ಎರಡು ತಿಂಗಳೊಳಗೆ ಮುಕ್ತಾಯಗೊಳ್ಳಲಿವೆ. ಹೀಗಾಗಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗೆ ಪಾಕಿಸ್ತಾನ ಚುನಾವಣಾ ಆಯೋಗ (ECP) ಸಿದ್ಧತೆಗಳನ್ನು ನಡೆಸುತ್ತಿದೆ.
ಮುಂಬರುವ ಸಾರ್ವತ್ರಿಕ ಚುನಾವಣೆಯ ಸಿದ್ಧತೆಗಳ ಕುರಿತು ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ಅವರಿಗೆ ಮಾಹಿತಿ ನೀಡಲಾಯಿತು. ಮೂಲಗಳ ಪ್ರಕಾರ, ಅಗತ್ಯ ಚುನಾವಣಾ ಸಾಮಗ್ರಿ ಮತ್ತು ಮತಯಂತ್ರಗಳ ಕಾಗದಪತ್ರಗಳ ಸಂಗ್ರಹಣೆ ಪೂರ್ಣಗೊಂಡಿದೆ ಮತ್ತು ಅದರ ಸಂಗ್ರಹಣೆಯನ್ನು ಖಚಿತಪಡಿಸಲಾಗಿದೆ ಎಂದು ರಾಜಾ ಅವರಿಗೆ ತಿಳಿಸಲಾಯಿತು. ಇದಲ್ಲದೆ, ಮತಗಟ್ಟೆಗಳ ಪಟ್ಟಿಯ ಕರಡನ್ನು ಸಹ ಸಿದ್ಧಪಡಿಸಲಾಗಿದ್ದು, ಅಧಿಸೂಚನೆಯ ನಂತರ ಅದನ್ನು ಚುನಾವಣಾಧಿಕಾರಿಗಳಿಗೆ ರವಾನಿಸಲಾಗುತ್ತದೆ.
ಕಾನೂನಿನ ಪ್ರಕಾರ ಮತದಾರರ ನೋಂದಣಿ, ಪಟ್ಟಿಯಿಂದ ಹೆಸರು ಕಡಿಮೆ ಮಾಡುವುದು ಮತ್ತು ಪರಿಶೀಲನೆಯ ಕೊನೆಯ ದಿನಾಂಕ ಜುಲೈ 13 ಆಗಿದೆ. ಈ ಮಧ್ಯೆ ಆಯೋಗವು ಜಾಗೃತಿ ಅಭಿಯಾನವನ್ನು ಸಹ ಪ್ರಾರಂಭಿಸಿದೆ ಮತ್ತು ಮತದಾರರ ಪಟ್ಟಿಗಳ ಮುದ್ರಣ ಮತ್ತು ವಿತರಣೆಗಾಗಿ, ಮತದಾನದ ಸಾಮಗ್ರಿ ಮತ್ತು ಮತಪತ್ರಗಳಿಗೆ ಕಾಗದಗಳ ಸಂಗ್ರಹಣೆಗಾಗಿ ರಾಷ್ಟ್ರೀಯ ಡೇಟಾಬೇಸ್ ನಿಯಂತ್ರಣ ಪ್ರಾಧಿಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ಮೇ 9 ರ ಹಿಂಸಾಚಾರದ ನಂತರ ತನ್ನ ಪ್ರತಿಸ್ಪರ್ಧಿ ಇಮ್ರಾನ್ ಖಾನ್ ಮತ್ತು ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ನ ರಾಜಕೀಯ ಅಸ್ತಿತ್ವವನ್ನು ಕಳೆದುಕೊಂಡ.ನಂತರ ಪ್ರಸ್ತುತ ಸಮ್ಮಿಶ್ರ ಸರ್ಕಾರವು ಚುನಾವಣೆಗಳನ್ನು ಎದುರಿಸಲು ಸಿದ್ಧವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. "ಪ್ರಸ್ತುತ ಸರ್ಕಾರವು ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಸಮ್ಮಿಶ್ರ ಸ್ಥಾಪನೆಯನ್ನು ಮರು ಸ್ಥಾಪಿಸುವ ಹಾದಿ ಈಗ ಸ್ಪಷ್ಟವಾಗಿದೆ. ಇಮ್ರಾನ್ ಖಾನ್ ಸರ್ಕಾರಕ್ಕೆ ದೊಡ್ಡ ಬೆದರಿಕೆಯಾಗಿದ್ದರು. ಈಗ ಅವರ ಪಕ್ಷವು ಒಡೆದು ಚೂರಾಗಿದೆ ಮತ್ತು ಅವರ ರಾಜಕೀಯ ಸ್ಥಿತಿ ತೀವ್ರವಾಗಿ ದುರ್ಬಲಗೊಂಡಿದೆ. ತನ್ನ ಅಂಗಪಕ್ಷಗಳೊಂದಿಗೆ ಮತ್ತೊಂದು ಸಮ್ಮಿಶ್ರ ಸರ್ಕಾರವನ್ನು ರಚಿಸಲು ಸರ್ಕಾರಕ್ಕೆ ಯಾವುದೇ ಸಮಸ್ಯೆ ಅಥವಾ ಸವಾಲುಗಳಿಲ್ಲ” ಎಂದು ಹಿರಿಯ ರಾಜಕೀಯ ವಿಶ್ಲೇಷಕ ಜಾವೇದ್ ಸಿದ್ದಿಕ್ ಹೇಳಿದರು.
ಖಾನ್ ಮತ್ತು ಅವರ ಪಕ್ಷವು ಒಡ್ಡಿದ ಪ್ರಬಲ ರಾಜಕೀಯ ಸವಾಲಿನಿಂದಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಸೋಲುವ ಭೀತಿಯಿಂದ ಸಾರ್ವತ್ರಿಕ ಚುನಾವಣೆಯನ್ನು ವಿಳಂಬಗೊಳಿಸುವತ್ತ ಸರ್ಕಾರ ಒಲವು ತೋರುತ್ತಿದೆ ಎಂದು ಈ ಹಿಂದೆ ಆರೋಪಿಸಲಾಗಿತ್ತು.
ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯದಲ್ಲಿಯೇ ಪಾಕಿಸ್ತಾನವು ಚುನಾವಣೆಗೆ ಸಜ್ಜಾಗಬೇಕಿದೆ. ತೀವ್ರ ನಗದು ಕೊರತೆಯಿರುವ ಪಾಕಿಸ್ತಾನವು ಹೆಚ್ಚಿನ ಬಾಹ್ಯ ಸಾಲ, ದುರ್ಬಲ ಸ್ಥಳೀಯ ಕರೆನ್ಸಿ ಮತ್ತು ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಮೀಸಲು ಸಮಸ್ಯೆಗಳಿಂದ ಹೆಣಗುತ್ತಿದೆ. ಹಣದುಬ್ಬರ ಮಟ್ಟವು ಏಪ್ರಿಲ್‌ನಲ್ಲಿ ವರ್ಷದಲ್ಲಿ ಶೇಕಡ 36.4 ರಷ್ಟು ಏರಿಕೆಯಾಗಿದೆ. ಮುಖ್ಯವಾಗಿ ಆಹಾರದ ಬೆಲೆಗಳು ಕೈಗೆಟುಕದ ಮಟ್ಟಕ್ಕೆ ತಲುಪಿವೆ.
ಇದನ್ನೂ ಓದಿ : ಕರಾಚಿ ಬಂದರು ಯುಎಇಗೆ ಹಸ್ತಾಂತರ: ಹಣಕ್ಕಾಗಿ ಪಾಕ್ ಸರ್ಕಾರದ ನಿರ್ಧಾರ