ಲಾಹೋರ್(ಪಾಕಿಸ್ತಾನ):ಸಾರ್ವತ್ರಿಕ ಚುನಾವಣೆಗೂ ಮೊದಲು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಸಂಸ್ಥಾಪಕ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ದೊಡ್ಡ ಹಿನ್ನಡೆ ಉಂಟಾಗಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಬಯಸಿ ಸಲ್ಲಿಸಿದ್ದ ಅಫಿಡವಿಟ್ಗಳನ್ನು ಅಲ್ಲಿನ ಚುನಾವಣಾ ಆಯೋಗ ತಿರಸ್ಕರಿಸಿದೆ. ಇದರ ಜೊತೆಗೆ ಪಕ್ಷದ ಕೆಲ ಪ್ರಮುಖರ ನಾಮಪತ್ರಗಳೂ ರಿಜೆಕ್ಟ್ ಆಗಿವೆ.
ತೋಷಖಾನಾ ಪ್ರಕರಣದಲ್ಲಿ ದೋಷಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಮ್ರಾನ್ ಖಾನ್ ಅನರ್ಹತೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ಆಯೋಗ ತಿರಸ್ಕರಿಸಿದೆ. ಇದನ್ನು ರಾಜಕೀಯ ಒತ್ತಡ ಎಂದು ಮಾಜಿ ಪ್ರಧಾನಿ ಆರೋಪಿಸಿದ್ದಾರೆ.
ಫೆಬ್ರವರಿ 8ರಂದು ಪಾಕಿಸ್ತಾನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇಮ್ರಾನ್ ಖಾನ್ ಲಾಹೋರ್ ಮತ್ತು ಮಿಯಾನ್‌ವಾಲಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಎರಡೂ ಕ್ಷೇತ್ರದ ಪ್ರತಿನಿಧಿಯಾಗಿರದ ಅವರ ವಿರುದ್ಧ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ. ಮತ್ತೊಮ್ಮೆ ಪ್ರಧಾನಿಯಾಗುವ ಅಭಿಲಾಷೆ ಹೊಂದಿರುವ ಖಾನ್ಗೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ.
ಅನರ್ಹತೆಯ ತೊಡರುಗಾಲು:ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ತಮಗೆ ಬಂದ ವಿದೇಶಿ ಉಡುಗೊರೆಗಳನ್ನು ವೈಯಕ್ತಿಕ ಕಾರಣಕ್ಕಾಗಿ ಮಾರಾಟ ಮಾಡಿದ್ದರು. ಇದರ ವಿರುದ್ಧ ದಾಖಲಾದ ಪ್ರಕರಣದಲ್ಲಿ ದೋಷಿಯಾಗಿ, ಜೈಲು ಪಾಲಾಗಿದ್ದರು. ತೋಷಖಾನಾ ಪ್ರಕರಣ ಎಂದು ಹೇಳಲಾಗುವ ಈ ಕೇಸ್ನಿಂದಾಗಿ ಪ್ರಧಾನಿ ಹುದ್ದೆಯನ್ನೂ ಕಳೆದುಕೊಳ್ಳುವಂತಾಯಿತು. ಬಳಿಕ ಸಂಸತ್ ಸ್ಥಾನದಿಂದಲೂ ಅನರ್ಹರಾದರು.