ಇಸ್ಲಾಮಾಬಾದ್ (ಪಾಕಿಸ್ತಾನ) : ಇಲ್ಲಿನ ಫೆಡರಲ್ ನ್ಯಾಯಾಂಗ ಸಂಕೀರ್ಣದಲ್ಲಿ (ಎಫ್‌ಜೆಸಿ) ಮಾರ್ಚ್ 18 ರಂದು ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ವಿರುದ್ಧ ದಾಖಲಾಗಿರುವ ಏಳು ಪ್ರಕರಣಗಳಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಜಾಮೀನು ನೀಡಿದೆ. ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್, ಗೋಲ್ರಾ, ಬಾರಾ ಕಹು, ರಾಮ್ನಾ, ಖನ್ನಾ ಮತ್ತು ಸಿಟಿಡಿ ಪೊಲೀಸ್ ಠಾಣೆಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಏಳು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕೆಂದು ಸೋಮವಾರ ಇಸ್ಲಾಮಾಬಾದ್ ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಕೋರಿದ್ದರು.
ಈ ಪ್ರಕರಣಗಳು ಮಾರ್ಚ್ 18 ರಂದು ಫೆಡರಲ್ ಕೋರ್ಟ್ ಕಾಂಪ್ಲೆಕ್ಸ್‌ನ ಹೊರಗೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದ್ದಾಗಿವೆ. ಅವತ್ತು ಇಮ್ರಾನ್ ತೋಷಖಾನಾ ಪ್ರಕರಣದಲ್ಲಿ ಸಾಕ್ಷ್ಯ ಹೇಳಿದ್ದರು. ಇಸ್ಲಾಮಾಬಾದ್ ಹೈಕೋರ್ಟ್ ಅಧ್ಯಕ್ಷ, ನ್ಯಾಯಮೂರ್ತಿ ಆಮರ್ ಫಾರೂಕ್ ಮತ್ತು ನ್ಯಾಯಾಧೀಶ ಮಿಯಾಂಗುಲ್ ಹಸನ್ ಔರಂಗಜೇಬ್ ಅವರನ್ನು ಒಳಗೊಂಡ ನ್ಯಾಯಪೀಠವು ಇಮ್ರಾನ್ ಅವರ ಅರ್ಜಿಯ ವಿಚಾರಣೆ ನಡೆಸಿತು. ಒಂದು ವೇಳೆ ಬಂಧಿತರಾದರೆ ಇಮ್ರಾನ್ ಖಾನ್ ಭರಿಸಲಾಗದ ನಷ್ಟ ಅನುಭವಿಸುವಂತಾಗುತ್ತದೆ ಎಂದು ಇಮ್ರಾನ್ ಪರ ವಕೀಲ ಸಲ್ಮಾನ್ ಸಫ್ದರ್ ನ್ಯಾಯಾಲಯಕ್ಕೆ ತಿಳಿಸಿದರು.
ಇದಲ್ಲದೆ, ಅರ್ಜಿದಾರರು ದೇಶದ ಏಕೈಕ ಅತಿದೊಡ್ಡ ರಾಜಕೀಯ ಪಕ್ಷದ ಮುಖ್ಯಸ್ಥರಾಗಿರುವುದರಿಂದ, ಅವರಿಗೆ ನಿರೀಕ್ಷಣಾ ಜಾಮೀನು ನೀಡದಿದ್ದರೆ ಅವರ ರಾಜಕೀಯ ವಿರೋಧಿಗಳು ಅವರ ವಿರುದ್ಧ ಸೇಡಿನ ಕ್ರಮ ಕೈಗೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ವಾದಿಸಿದರು. ಇಮ್ರಾನ್ ಖಾನ್ ಅವರ ಕಾರನ್ನು ಬೃಹತ್ ಸಂಖ್ಯೆಯ ಇಸ್ಲಾಮಾಬಾದ್ ಪೊಲೀಸರು ಸುತ್ತುವರೆದಿರುವ ಹಾಗೂ ಪೊಲೀಸರ ಭದ್ರತೆಯ ಮಧ್ಯೆ ಇಮ್ರಾನ್ ನ್ಯಾಯಾಲಯದ ಒಳಗೆ ಹೋಗುತ್ತಿರುವ ದೃಶ್ಯದ ವೀಡಿಯೊ ಒಂದನ್ನು ಪಿಟಿಐನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.