ಕರ್ನಾಟಕ

karnataka

ETV Bharat / international

ಹಣಕಾಸು ಸಹಾಯಕ್ಕಾಗಿ ಅಂಗಲಾಚುತ್ತಿರುವ ಪಾಕಿಸ್ತಾನ; ಗ್ಯಾರಂಟಿ ನೀಡಿ ಎಂದ IMF - ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು

ಹಣಕಾಸು ನೆರವಿಗಾಗಿ ಪಾಕಿಸ್ತಾನ ತನ್ನ ಮಿತ್ರರಾಷ್ಟ್ರಗಳ ಮೊರೆ ಹೋಗಿದೆ. ಪಾಕಿಸ್ತಾನದಲ್ಲಿರುವ ಸರ್ಕಾರದ ಮೇಲೆ ಭರವಸೆ ಇಲ್ಲದ ಕಾರಣದಿಂದ ಅನೇಕ ರಾಷ್ಟ್ರಗಳು ಸಹಾಯ ನೀಡಲು ಮುಂದಾಗುತ್ತಿಲ್ಲ ಎನ್ನಲಾಗಿದೆ. ಐಎಂಎಫ್​ ಕೂಡ​ ಪಾಕಿಸ್ತಾನಕ್ಕೆ ಗ್ಯಾರಂಟಿ ನೀಡಿ ಎಂದು ಸೂಚಿಸಿದೆ.

ಹಣಕಾಸು ಸಹಾಯಕ್ಕಾಗಿ ಅಂಗಲಾಚುತ್ತಿರುವ ಪಾಕಿಸ್ತಾನ; ಗ್ಯಾರಂಟಿ ನೀಡಿ ಎಂದ ಐಎಂಎಫ್​
http://10.10.50.80:6060//finalout3/odisha-nle/thumbnail/06-August-2022/16030498_32_16030498_1659771218249.png

By

Published : Aug 6, 2022, 3:30 PM IST

ಇಸ್ಲಾಮಾಬಾದ್(ಪಾಕಿಸ್ತಾನ): ಐಎಂಎಫ್​ (IMF)ನಿಂದ ಪಾಕಿಸ್ತಾನಕ್ಕೆ ಬರಬೇಕಿರುವ ನಿರ್ಣಾಯಕ 1.7 ಶತಕೋಟಿ ಯುಎಸ್ ಡಾಲರ್ ಕಂತುಗಳನ್ನು ನಿಗದಿಗಿಂತ ಮುನ್ನವೇ ಪಡೆದುಕೊಳ್ಳಲು ಪಾಕಿಸ್ತಾನವು ಇತ್ತೀಚೆಗಷ್ಟೇ ಅಮೆರಿಕದ ಸಹಾಯವನ್ನು ಕೋರಿದೆ. ಇದಾಗಿ ಕೆಲವೇ ದಿನಗಳ ನಂತರ ಈಗ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಸೌದಿ ಅರೇಬಿಯಾ ಮತ್ತು ಯುಎಇಗೆ ಸಹಾಯ ಮಾಡುವಂತೆ ಮೊರೆ ಇಟ್ಟಿದ್ದಾರೆ. ನಗದು ಕೊರತೆಯಿಂದ ಸಂಕಷ್ಟದಲ್ಲಿರುವ ತನ್ನ ದೇಶಕ್ಕೆ ಹಣಕಾಸಿನ ನೆರವು ಖಚಿತಪಡಿಸಿಕೊಳ್ಳುವ ಪ್ರಯತ್ನಗಳ ಅಂಗವಾಗಿ ಬಾಜ್ವಾ ಸಹಾಯ ಯಾಚಿಸಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯಕಾರಿ ಮಂಡಳಿಯು 1.2 ಶತಕೋಟಿ ಡಾಲರ್ ಕಂತುಗಳ ಮುಂದಿನ ಭಾಗವನ್ನು ಔಪಚಾರಿಕವಾಗಿ ಅನುಮೋದಿಸಲು ಈ ತಿಂಗಳ ಕೊನೆಯಲ್ಲಿ ಸಭೆ ಸೇರಲಿದೆ. ಆದರೆ ಹಣಕಾಸು ಸಹಾಯ ನೀಡಬೇಕಾದರೆ ಅದಕ್ಕಾಗಿ ಪಾಕಿಸ್ತಾನವು ತನ್ನ ಮಿತ್ರ ರಾಷ್ಟ್ರಗಳಿಂದ ಖಾತ್ರಿ ನೀಡಬೇಕೆಂದು ಐಎಂಎಫ್​ ಬಯಸುತ್ತಿದೆ.

ಪಾಕಿಸ್ತಾನದ ಮಿತ್ರ ರಾಷ್ಟ್ರಗಳು ಅದರ ಬಾಹ್ಯ ಅವಶ್ಯಕತೆಗಳಿಗಾಗಿ 4 ಶತಕೋಟಿ ಡಾಲರ್ ಹಣ ಒದಗಿಸುವ ಗ್ಯಾರಂಟಿ ನೀಡಬೇಕೆಂದು ಐಎಂಎಫ್ ಪಾಕಿಸ್ತಾನವನ್ನು ಕೇಳಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಪಾಕಿಸ್ತಾನವು ಸೌದಿ ಅರೇಬಿಯಾ, ಯುಎಇ ಮತ್ತು ಚೀನಾದಂತಹ ಪ್ರಮುಖ ಮಿತ್ರರಾಷ್ಟ್ರಗಳೊಂದಿಗೆ ಅಗತ್ಯ ನಿಧಿಯನ್ನು ಒದಗಿಸಲು ಮಾತುಕತೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

ಪ್ರಧಾನಿ ಶೆಹಬಾಜ್ ಷರೀಫ್ ಅವರು ಏಪ್ರಿಲ್‌ನಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದಾಗ, ರಿಯಾದ್​​ ಯಾವುದೇ ದೃಢವಾದ ಭರವಸೆ ನೀಡದ ಕಾರಣ ಅವರು ಬರಿಗೈಯಲ್ಲಿ ಮರಳಿದ್ದರು. ಯುಎಇ ಕೂಡ ನೆರವಿಗೆ ಬರಲು ಹಿಂದೇಟು ಹಾಕಿತ್ತು. ಸಾಲ ನೀಡುವ ಬದಲು ಯುಎಇ ಪಾಕಿಸ್ತಾನಕ್ಕೆ ಷೇರುಗಳು ಮತ್ತು ಆಸ್ತಿಗಳನ್ನು ಖರೀದಿಸುವ ಆಫರ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಸೇನೆಯು ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿನ ಅಧಿಕಾರಿಗಳೊಂದಿಗೆ ಆರ್ಥಿಕ ಸಹಾಯ ಕೋರಿ ಚರ್ಚೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನ ಸರ್ಕಾರದ ಭರವಸೆಗಳನ್ನು ಒಪ್ಪಿಕೊಳ್ಳಲು ಬಹುಶಃ ಇತರ ದೇಶಗಳು ಸಿದ್ಧವಾಗಿಲ್ಲದ ಕಾರಣದಿಂದ ಸೇನಾ ಮುಖ್ಯಸ್ಥರು ಈ ವಿಷಯದಲ್ಲಿ ತಾವೇ ಖುದ್ದಾಗಿ ಪ್ರಯತ್ನಗಳನ್ನು ನಡೆಸಿದ್ದಾರೆ ಎನ್ನಲಾಗ್ತಿದೆ.

ABOUT THE AUTHOR

...view details