ಇಸ್ಲಾಮಾಬಾದ್:ದಾಖಲೆ ಇಲ್ಲದೆ ಪಾಕಿಸ್ತಾನದಲ್ಲಿ ವಾಸ ಮಾಡುತ್ತಿರುವ ಅಫ್ಘನ್ ನಿರಾಶ್ರಿತರಿಗೆ ದೇಶ ತೊರೆಯಲು ನೀಡಲಾಗಿದ್ದ ಗಡುವು ಮುಕ್ತಾಯಗೊಂಡಿದ್ದು, ಈಗಲೂ ದೇಶದಲ್ಲಿ ಉಳಿದುಕೊಂಡಿರುವ ನಿರಾಶ್ರಿತರನ್ನು ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ಹುಡುಕಿ ಹೊರಹಾಕಲಾರಂಭಿಸಿದ್ದಾರೆ. ಪಾಕಿಸ್ತಾನದಲ್ಲಿರುವ 1.7 ಮಿಲಿಯನ್ ಅಫ್ಘನ್ ಪ್ರಜೆಗಳನ್ನು ದೇಶದಿಂದ ಹೊರಹಾಕುವ ಬೃಹತ್ ಕಾರ್ಯಾಚರಣೆಗೆ ಪಾಕಿಸ್ತಾನ ಸರ್ಕಾರ ಮುಂದಾಗಿದ್ದು, ಹಂತ ಹಂತವಾಗಿ ಇದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ.
ಅಫ್ಘಾನಿಸ್ತಾನದ ಗಡಿ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಬಂಧನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದಾಖಲೆರಹಿತ ಅಫ್ಘನ್ ಪ್ರಜೆಗಳನ್ನು ಬಂಧಿಸಿ ಮೊದಲಿಗೆ ಈ ಕೇಂದ್ರಗಳಿಗೆ ಕರೆತರಲಾಗುತ್ತದೆ ಹಾಗೂ ನಂತರ ಅವರನ್ನು ಅವರ ತಾಯ್ನಾಡಿಗೆ ಕಳುಹಿಸಲಾಗುತ್ತದೆ. ಪಾಕಿಸ್ತಾನದ ಈ ಕ್ರಮವನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವಕೀಲರ ಗುಂಪುಗಳು ಟೀಕಿಸಿವೆ. ಲಕ್ಷಾಂತರ ಅಫ್ಘನ್ ಪ್ರಜೆಗಳು ಮತ್ತು ಕುಟುಂಬಗಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಹೊರಹಾಕುವ ನಿರ್ಧಾರಕ್ಕೆ ಮಾನವ ಹಕ್ಕು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಮತ್ತೊಂದೆಡೆ, ಇಲ್ಲಿಯವರೆಗೆ ಸುಮಾರು 1,40,322 ಜನರು ಈಗಾಗಲೇ ಸ್ವಯಂಪ್ರೇರಿತವಾಗಿ ದೇಶ ತೊರೆದಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. "ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಬಂಧಿಸಿ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ನವೆಂಬರ್ 1 ರಿಂದ ಪ್ರಾರಂಭವಾಗಿದೆ. ಸ್ವಯಂಪ್ರೇರಿತ ಮರಳುವಿಕೆಯನ್ನು ಈಗಲೂ ಪ್ರೋತ್ಸಾಹಿಸಲಾಗುವುದು" ಎಂದು ಇಸ್ಲಾಮಾಬಾದ್ನ ಆಂತರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.