ಕರ್ನಾಟಕ

karnataka

ETV Bharat / international

ಅಫ್ಘಾನ್ ನಿರಾಶ್ರಿತರಿಗೆ ದೇಶ ತೊರೆಯುವಂತೆ ಸೂಚಿಸಿದ ಪಾಕಿಸ್ತಾನ; ನ.1ರ ನಂತರ ಗಡಿಪಾರು

ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಅಫ್ಘಾನಿಸ್ತಾನ ವಲಸಿಗರನ್ನು ಹೊರಹಾಕಲು ಪಾಕಿಸ್ತಾನ ಆರಂಭಿಸಿದೆ.

Pakistan starts eviction process of illegal Afghans
Pakistan starts eviction process of illegal Afghans

By ETV Bharat Karnataka Team

Published : Oct 6, 2023, 5:31 PM IST

ಇಸ್ಲಾಮಾಬಾದ್ : ಪಾಕಿಸ್ತಾನ ತನ್ನ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಅಫ್ಘಾನಿಸ್ತಾನ ನಾಗರಿಕರನ್ನು ಹೊರಹಾಕಲು ಆರಂಭಿಸಿದೆ. 2023ರ ನವೆಂಬರ್ 1ರೊಳಗೆ ಸ್ವಯಂಪ್ರೇರಿತವಾಗಿ ದೇಶ ತೊರೆಯುವಂತೆ ಅಕ್ರಮ ವಲಸಿಗರಿಗೆ ಸೂಚಿಸಲಾಗಿದೆ. ಇಲ್ಲವಾದರೆ ಅವರನ್ನು ಬಂಧಿಸಿ ಅಫ್ಘಾನಿಸ್ತಾನಕ್ಕೆ ಗಡಿಪಾರು ಮಾಡಲಾಗುವುದು ಎಂದು ಪಾಕಿಸ್ತಾನ ಸರ್ಕಾರ ಎಚ್ಚರಿಕೆ ನೀಡಿದೆ.

ಪೊಲೀಸ್ ಅಧಿಕಾರಿಗಳು ವಿವಿಧ ಅಫ್ಘಾನ್ ನಿರಾಶ್ರಿತರ ಶಿಬಿರಗಳು ಮತ್ತು ಅಫ್ಘಾನ್ ಪ್ರಜೆಗಳು ವಾಸಿಸುವ ಇತರ ಪ್ರದೇಶಗಳ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ್ದಾರೆ. ಪಾಕಿಸ್ತಾನದಲ್ಲಿ ವಾಸಿಸಲು ಹಕ್ಕು ಸಾಬೀತುಪಡಿಸುವ ಯಾವುದೇ ಕಾನೂನು ದಾಖಲೆಗಳಿಲ್ಲದ ನೂರಾರು ಕುಟುಂಬಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇಸ್ಲಾಮಾಬಾದ್ ಮತ್ತು ಇತರ ಪ್ರಮುಖ ನಗರಗಳಲ್ಲಿ ತಾತ್ಕಾಲಿಕ ಅಫ್ಘಾನ್ ನಿರಾಶ್ರಿತರ ಶಿಬಿರಗಳನ್ನು ಅಧಿಕಾರಿಗಳು ಹೆಚ್ಚಿಸಲು ಪ್ರಾರಂಭಿಸಿದ್ದಾರೆ. ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ತೋರ್ಖಾಮ್ ಗಡಿಯ ಮೂಲಕ ಅಫ್ಘಾನಿಸ್ತಾನದೊಳಗೆ ಹೋಗುವುದನ್ನು ಬಿಟ್ಟು ಈ ವಲಸಿಗರಿಗೆ ಅನ್ಯ ಮಾರ್ಗವೇ ಇಲ್ಲದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಕನಿಷ್ಠ 20 ಕುಟುಂಬಗಳನ್ನು ಹೊತ್ತ ಕನಿಷ್ಠ 16 ಟ್ರಕ್​ಗಳು ಗುರುವಾರ ತೋರ್ಖಾಮ್ ಗಡಿಯನ್ನು ತಲುಪಿವೆ. ಶುಕ್ರವಾರ ಸುಮಾರು 40 ಕುಟುಂಬಗಳು ಅಲ್ಲಿಗೆ ತಲುಪಿವೆ. "ಕಾನೂನು ಅವಶ್ಯಕತೆಗಳು ಪೂರ್ಣಗೊಂಡ ನಂತರ, ಸುಮಾರು 1,000 ಜನರನ್ನು ಒಳಗೊಂಡಿರುವ ಈ ಕುಟುಂಬಗಳಿಗೆ ಅಫ್ಘಾನಿಸ್ತಾನದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಈ ನಿವಾಸಿಗಳು ಇಸ್ಲಾಮಾಬಾದ್​ನ ಮಾರ್ಗಲ್ಲಾ ಟೌನ್ ಬಳಿಯ ಅಫ್ಘಾನ್ ನಿರಾಶ್ರಿತರ ಶಿಬಿರದಿಂದ ಬಂದವರಾಗಿದ್ದಾರೆ. ಇವರು ವಾಸಿಸುತ್ತಿದ್ದ ನಿರಾಶ್ರಿತರ ಶಿಬಿರವನ್ನು ಫೆಡರಲ್ ಸರ್ಕಾರದ ಸೂಚನೆಯ ಮೇರೆಗೆ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ನೆಲಸಮಗೊಳಿಸಿದೆ" ಎಂದು ಅಧಿಕಾರಿ ಹೇಳಿದರು. ದೇಶದಲ್ಲಿ ತಮ್ಮ ಗುರುತಿನ ಸ್ಥಾನಮಾನದ ಪುರಾವೆಯಾಗಿ ಯಾವುದೇ ಕಾನೂನು ದಾಖಲೆ ಹೊಂದಿರದ ಕಾರಣದಿಂದ ಇಲ್ಲಿಯವರೆಗೆ ಕನಿಷ್ಠ 503 ಅಫ್ಘಾನ್ ನಿರಾಶ್ರಿತರನ್ನು ಜೈಲಿಗೆ ಕಳುಹಿಸಲಾಗಿದೆ.

ಅಕ್ರಮ ವಲಸಿಗರನ್ನು ಹೊರದಬ್ಬುವ ಪಾಕಿಸ್ತಾನದ ದೊಡ್ಡ ನಿರ್ಧಾರವು ಅಫ್ಘಾನ್ ತಾಲಿಬಾನ್ ಆಡಳಿತಕ್ಕೆ ಸರಿ ಕಂಡಿಲ್ಲ. ಪಾಕಿಸ್ತಾನದ ನಿರ್ಧಾರವು ಸ್ವೀಕಾರಾರ್ಹವಲ್ಲ ಎಂದು ತಾಲಿಬಾನ್ ಹೇಳಿದೆ. ಅಫ್ಘಾನ್ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಪಾಕಿಸ್ತಾನ ಸರ್ಕಾರದ ನಡವಳಿಕೆಯನ್ನು ಪ್ರಶ್ನಿಸಿದ್ದು, ಕನಿಷ್ಠ 1.7 ಮಿಲಿಯನ್ ನೋಂದಣಿಯಾಗದ ಅಫ್ಘಾನ್ ವಲಸಿಗರನ್ನು ಅಫ್ಘಾನಿಸ್ತಾನಕ್ಕೆ ವಾಪಸ್ ಕಳುಹಿಸುವ ಯೋಜನೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

"ಅಫ್ಘಾನ್ ನಿರಾಶ್ರಿತರ ವಿರುದ್ಧ ಪಾಕಿಸ್ತಾನದ ವರ್ತನೆ ಸ್ವೀಕಾರಾರ್ಹವಲ್ಲ. ಪಾಕಿಸ್ತಾನ ಸರ್ಕಾರ ತನ್ನ ಯೋಜನೆಯನ್ನು ಮರುಪರಿಶೀಲಿಸಬೇಕು. ಅಫ್ಘಾನ್ ನಿರಾಶ್ರಿತರು ಪಾಕಿಸ್ತಾನದ ಭದ್ರತಾ ಸಮಸ್ಯೆಗಳಲ್ಲಿ ಭಾಗಿಯಾಗಿಲ್ಲ. ಎಲ್ಲಿಯವರೆಗೆ ಅವರು ಸ್ವಯಂಪ್ರೇರಣೆಯಿಂದ ಪಾಕಿಸ್ತಾನವನ್ನು ತೊರೆಯುವುದಿಲ್ಲವೋ ಅಲ್ಲಿಯವರೆಗೆ ಆ ದೇಶವು ಅವರನ್ನು ಸಹಿಸಿಕೊಳ್ಳಬೇಕು" ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

ಇದನ್ನೂ ಓದಿ : 26 ಕುರ್ದಿಶ್ ಉಗ್ರರನ್ನು ಹತ್ಯೆಗೈದ ಟರ್ಕಿ; ಆತ್ಮಾಹುತಿ ದಾಳಿಗೆ ಪ್ರತೀಕಾರ

ABOUT THE AUTHOR

...view details