ಇಸ್ಲಾಮಾಬಾದ್(ಪಾಕಿಸ್ತಾನ):ಪಾಕಿಸ್ತಾನ ರಾಜಕೀಯ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಅಲ್ಲಿ ಯಾವುದೇ ಪ್ರಧಾನಿ ತಮ್ಮ ಅವಧಿ ಪೂರ್ಣಗೊಳಿಸಲು ಸೇನೆ ಬಹುತೇಕವಾಗಿ ಬಿಟ್ಟಿಲ್ಲ. ಸೇನೆ ಅಲ್ಲಿನ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಗೊತ್ತೇ ಇದೆ. ಇದೀಗ ಇಮ್ರಾನ್ ಕುರ್ಚಿಗೂ ಸಂಚಕಾರ ಬಂದಿದೆ. ಶೀಘ್ರವೇ ಅವರ ವಿರುದ್ಧ ಅವಿಸ್ವಾಸ ನಿರ್ಣಯ ಮಂಡನೆ ಮಾಡಿ, ಮತಕ್ಕೆ ಹಾಕುವ ಸಾಧ್ಯತೆ ಇದೆ.
ಈ ನಡುವೆ ಅಧಿಕಾರ ಉಳಿಸಿಕೊಳ್ಳಲು ಇಮ್ರಾನ್ ಖಾನ್ ತಮ್ಮ ಕಡೆಯಿಂದ ಸಾಧ್ಯ ಇರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ವಿದೇಶಿ ಪಿತೂರಿ ನಡೆಯುತ್ತಿದೆ ಎಂದು ಖಾನ್ ಆರೋಪಿಸಿದ್ದಾರೆ. ಪರೋಕ್ಷವಾಗಿ ಅಮೆರಿಕದ ಬಗ್ಗೆಯೇ ಅವರು ಮಾತನಾಡುತ್ತಿದ್ದಾರೆ. ಇದೇ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂದೂ ಪ್ರತಿಪಾದಿಸುತ್ತಿದ್ದಾರೆ.
ಅಮೆರಿಕ ವಿರುದ್ಧ ಇಮ್ರಾನ್ ಪರೋಕ್ಷ ಕಿಡಿ:ಅಮೆರಿಕ ಹಾಗೂ ಯುರೋಪ್ ಜತೆಗಿನ ರಾಜತಾಂತ್ರಿಕ ನಿಲುವು ಹಾಗೂ ವಿದೇಶಿ ನೀತಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕ ಹಾಗೂ ಇತರ ಯುರೋಪ್ ರಾಷ್ಟ್ರಗಳು ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು, ಅವಿಶ್ವಾಸ ಗೊತ್ತುವಳಿಗೆ ಈ ರಾಷ್ಟ್ರಗಳಿಂದಲೇ ಹಣ ಹರಿದು ಬಂದಿದ್ದು, ಪಾಕಿಸ್ತಾನದ ಸರ್ಕಾರ ಅಸ್ತಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ವೇಳೆ ಇಮ್ರಾನ್ ಖಾನ್ ಮಾಸ್ಕೋಗೆ ಭೇಟಿ ನೀಡಿದ್ದರು. ಅಲ್ಲಿ ಪುಟಿನ್ ಜತೆ ಮಾತುಕತೆ ನಡೆಸಿದ್ದರು. ಇಮ್ರಾನ್ ಖಾನ್ ಈ ನಡೆ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತು. ರಷ್ಯಾ ದಾಳಿ ಖಂಡಿಸುವಂತೆ ಯುರೋಪ್ ರಾಷ್ಟ್ರಗಳಿಂದ ಪಾಕ್ ಮೇಲೆ ಒತ್ತಡ ಹಾಕಲಾಗಿತ್ತು. ಆದರೆ, ಪಾಕಿಸ್ತಾನ ರಷ್ಯಾ ದಾಳಿಯನ್ನು ಖಂಡಿಸಲು ಹಿಂದೇಟು ಹಾಕಿತ್ತು. ಇದು ಪಾಕ್ ಸರ್ಕಾರದ ಮೇಲೆ ಪರಿಣಾಮ ಬೀರಿದೆ.
ಪ್ರತಿಪಕ್ಷಗಳ ವಿರುದ್ಧ ಇಮ್ರಾನ್ ಖಾನ್ ಅಸಮಾಧಾನ:ಈ ಪರಿಣಾಮವೇ ತಮ್ಮ ಮೇಲೆ ಅವಿಶ್ವಾಸ ಗೊತ್ತುವಳಿ ಎಂದು ಇಮ್ರಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಪಿತೂರಿಗೆ ಬೆಂಬಲ ನೀಡಿರುವವರು ದೇಶದ್ರೋಹಿಗಳು ಮತ್ತು ಆತ್ಮಸಾಕ್ಷಿ ಮಾರಾಟ ಮಾಡಿಕೊಂಡಿರುವವರು ಎಂದು ಇಮ್ರಾನ್ ಖಾನ್ ಹರಿಹಾಯ್ದಿದ್ದಾರೆ. ಅಮೆರಿಕ - ಯುರೋಪ್ ರಾಷ್ಟ್ರಗಳ ಜತೆಗಿನ ಸಂಬಂಧ ಪಾಕಿಸ್ತಾನದ ಆರ್ಥಿಕತೆ ಮೇಲೆ ಹೊಡೆತ ನೀಡಬಹುದು ಎಂದು ಇದೇ ವೇಳೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಪಾಕಿಸ್ತಾನ ಸೇನೆ:ಆದರೆ, ಪಾಕಿಸ್ತಾನದ ಸೇನೆ ಅಮೆರಿಕ ಸೇರಿ ಯುರೋಪ್ ರಾಷ್ಟ್ರಗಳೊಂದಿಗೆ ಆಗಿರುವ ಒಡಕನ್ನು ಸರಿ ಪಡಿಸುವತ್ತ ಹಾಗೂ ಆಗಿ ಹಾನಿಯನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗೆ ಸಂಬಂಧ ಸರಿಪಡಿಸಿಕೊಳ್ಳುವ ಪ್ರಯತ್ನ ದಲ್ಲಿದೆ. ಇಸ್ಲಾಮಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕ್ ಸೇನಾ ಜನರಲ್ ಕಮರ್ ಜಾವೇದ್ ಬಾಜ್ವಾ, ಪಾಕಿಸ್ತಾನ ಬಣ ರಾಜಕೀಯದಲ್ಲಿ ನಂಬಿಕೆ ಇಟ್ಟಿಲ್ಲ ಎಂದು ಹೇಳಿದ್ದಾರೆ.
ವಿಶ್ವದಾದ್ಯಂತ ಜನರು ತಮ್ಮ ದೇಶ ಮತ್ತು ಪ್ರಪಂಚದ ಭವಿಷ್ಯದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಬಯಸುತ್ತದೆ. ದೇಶಗಳ ಅಭಿವೃದ್ಧಿ ಹಾಗೂ ಬೆಳವಣಿಗೆಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ನಾನು ನಂಬುತ್ತೇನೆ ಎಂದು ಬಾಜ್ವಾ ಹೇಳಿದ್ದಾರೆ. ನಾವು ಆರ್ಥಿಕ ಬೆಳವಣಿಗೆ ಹಾಗೂ ಕಾರ್ಯತಂತ್ರದ ಕವಲು ದಾರಿಯಲ್ಲಿದ್ದು, ದೇಶದ ಅಭಿವೃದ್ಧಿಯತ್ತ ಕೊಂಡೊಯ್ಯುವ ಸವಾಲುಗಳನ್ನು ಎದುರಿಸುತ್ತಿದ್ದು,ಜಾಗತಿಕ ಸಮುದಾಯದ ಪಾಲುದಾರಿಕೆಯೊಂದಿಗೆ ಮುನ್ನಡೆಯುವ ಯೋಚನೆ ಮಾಡುತ್ತಿದ್ದೇವೆ ಎಂದು ಇದೇ ವೇಳೆ ಬಾಜ್ವಾ ಸ್ಪಷ್ಟಪಡಿಸಿದ್ದಾರೆ . ಈ ಮೂಲಕ ಅವರು ಇಮ್ರಾನ್ ಖಾನ್ ಅವರ ಹೇಳಿಕೆಗಳಿಂದ ಆಗಿರುವ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ.
ಚೀನಾ ನಮ್ಮ ನಿಕಟವಾದ ಮಿತ್ರರಾಷ್ಟ್ರ:ದೇಶದ ಭದ್ರತೆ, ತನ್ನ ನಾಗರಿಕರ ಸುರಕ್ಷತೆ, ಘನತೆ ಮತ್ತು ಸಮೃದ್ಧಿಯ ಕಡೆ ಗಮನಹರಿಸುತ್ತಿದ್ದು ಇದುವೇ ದೇಶದ ಮೊದಲ ಆದ್ಯತೆ ಆಗಿದೆ ಎಂದು ಬಾಜ್ವಾ ಪ್ರತಿಪಾದಿಸಿದ್ದಾರೆ. ನಾವು ಯಾವುದೇ ಬಣ - ಗುಂಪು ರಾಜಕೀಯ ಮಾಡಲು ಇಷ್ಟಪಡುವುದಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ. ಚೀನಾದೊಂದಿಗಿನ ಸಂಬಂಧವನ್ನು ನಾವು ಕಾಪಾಡಿಕೊಂಡು ಹೋಗುತ್ತಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ.
ಅಮೆರಿಕದೊಂದಿಗಿನ ಸಂಬಂಧ ನಾವು ಮತ್ತಷ್ಟು ಬಲಗೊಳಿಸುತ್ತೇವೆ:ಇನ್ನು ಅಮೆರಿಕದೊಂದಿಗೆ ನಾವು ಸುದೀರ್ಘವಾದ ಆರ್ಥಿಕ ಸಂಬಂಧ ಹೊಂದಿದ್ದೇವೆ. ಆ ಸಂಬಂಧಗಳನ್ನು ಇದೇ ರೀತಿ ಮುಂದುವರೆಸಲು ಬಯಸುತ್ತೇವೆ ಮತ್ತು ಬಲಗೊಳಿಸುತ್ತೇವೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥರು ಇದೇ ವೇಳೆ ಪ್ರತಿಪಾದಿಸಿದರು.
ಅದೇ ರೀತಿ, ಯುರೋಪಿಯನ್, ಗಲ್ಫ್ ಮತ್ತು ಆಗ್ನೇಯ ಏಷ್ಯಾದ ದೇಶಗಳೊಂದಿಗಿನ ಸಂಬಂಧಗಳನ್ನು ನಾವು ಕಾಪಾಡಿಕೊಂಡು ಹೋಗುತ್ತೇವೆ. ಈ ಸಂಬಂಧಗಳು ಪಾಕಿಸ್ತಾನದ ಅಭಿವೃದ್ಧಿ ಮತ್ತು ಪ್ರಗತಿಗೆ ಪ್ರಮುಖವಾಗಿವೆ ಎಂದು ಬಾಜ್ವಾ ಇದೇ ವೇಳೆ ಸ್ಪಷ್ಟಪಡಿಸಿದರು.
ಇದನ್ನು ಓದಿ:ರಷ್ಯಾದ ಬೆಲ್ಗೊರೊಡ್ ಮೇಲೆ ದಾಳಿ ವಿಚಾರ: ಚರ್ಚೆಗೆ ಝೆಲೆನ್ಸ್ಕಿ ನಕಾರ