ಇಸ್ಲಾಮಾಬಾದ್ (ಪಾಕಿಸ್ತಾನ): ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನವು ವಿದ್ಯುತ್ ದರ ಏರಿಕೆ ಮಾಡಿದೆ. ಪ್ರತಿ ಯೂನಿಟ್‌ಗೆ 3.39 ಪಿಕೆಆರ್ (ಪಾಕಿಸ್ತಾನಿ ರೂಪಾಯಿ) ವಿಶೇಷ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಪಾಕಿಸ್ತಾನ ಸಂಪುಟದ ಆರ್ಥಿಕ ಸಮನ್ವಯ ಸಮಿತಿ (ಇಸಿಸಿ) ಅನುಮೋದಿಸಿದೆ. ಇದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಸ್ಥೆಯ ನೆರವು ಪಡೆಯುವ ಪ್ರಯತ್ನದ ಭಾಗವಾಗಿದೆ ಎಂದು ವರದಿಯಾಗಿದೆ.
ಸರಾಸರಿ ವಿದ್ಯುತ್ ಸುಂಕದಲ್ಲಿ ಹೆಚ್ಚಿಸುವುದರೊಂದಿಗೆ ಪಾಕಿಸ್ತಾನವು ಇತರ ಎರಡು ಕ್ರಮಗಳನ್ನು ಕೈಗೊಂಡಿದೆ. ಒಂದು ವರ್ಷದ ಮಟ್ಟಿಗೆ ಪ್ರತಿ ಯೂನಿಟ್‌ಗೆ 3.21 ಪಿಕೆಆರ್ ತ್ರೈಮಾಸಿಕ ಸುಂಕದ ಹೊಂದಾಣಿಕೆ ಮಾಡಲು ಮುಂದಾಗಿದೆ. ಜೊತೆಗೆ ವಿದ್ಯುತ್ ಬಾಕಿ ವಸೂಲಿಗೆ ಮುಂದಾಗಿದ್ದು, ಮೂರು ತಿಂಗಳವರೆಗೆ ಪ್ರತಿ ಯೂನಿಟ್‌ಗೆ 4 ಪಿಕೆಆರ್ವರೆಗೆ ವಿಧಿಸಲು ನಿರ್ಧರಿಸಿದೆ. ಹೊಸ ಶುಲ್ಕವು ರಾಷ್ಟ್ರೀಯ ಸುಂಕದ ನಿಯಮಿತ ಭಾಗವಾಗಿ ಉಳಿಯುತ್ತದೆ. ಇತರ ಎರಡು ಶುಲ್ಕಗಳು ಕೆಲವೊಮ್ಮೆ ಏಕಕಾಲಕ್ಕೆ ಬರುವ ಸಾಧ್ಯತೆ ಇದೆ.
ಇಷ್ಟೇ ಅಲ್ಲ, ಹೆಚ್ಚುವರಿಯಾಗಿ ಪ್ರತಿ ಯೂನಿಟ್‌ಗೆ 1 ಪಿಕೆಆರ್ ದರದಲ್ಲಿ ಮುಂದಿನ ಆರ್ಥಿಕ ವರ್ಷಕ್ಕೆ ಮುಂಗಡವಾಗಿ ಮತ್ತೊಂದು ಸರ್‌ಚಾರ್ಜ್ ವಿಧಿಸಲು ಕೂಡ ಅನುಮೋದಿಸಲಾಗಿದೆ. ವಿದ್ಯುತ್ ವಲಯದ ಸಾಲ ಸೇವೆಯನ್ನು ಸರಿದೂಗಿಸಲು ಪ್ರತಿ ಯೂನಿಟ್‌ಗೆ ಈಗಿರುವ 43 ಪೈಸೆ ಬದಲಿಗೆ ಈ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ವಿದ್ಯುತ್ ದರ ಹೆಚ್ಚಳ ಯಾಕೆ?: ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಿಂದ ಕೆಂಗೆಟ್ಟಿದೆ. ಹಣಕಾಸು ನೆರವಿಗಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದೆ. ಈ ಮೂಲಕ ನಗದು ಕೊರತೆಯಿರುವ ದೇಶವನ್ನು ದಿವಾಳಿಯಾಗದಂತೆ ತಡೆಯುವ ಪ್ರಯತ್ನ ಮಾಡುತ್ತಿದೆ. ಆದರೆ, ಎರಡು ದಿನಗಳ ಹಿಂದೆಯಷ್ಟೇ ಐಎಂಎಫ್ ಮತ್ತು ಪಾಕಿಸ್ತಾನದ ಬೇಲ್‌ಔಟ್ ಒಪ್ಪಂದದ ಮಾತುಕತೆ ವಿಫಲವಾಗಿದೆ. ಆದಾಗ್ಯೂ, ಏರುತ್ತಿರುವ ಹಣದುಬ್ಬರ ಮತ್ತು ಕಚ್ಚಾ ಉದ್ಯಮ ಸಾಮಗ್ರಿಗಳ ಕೊರತೆಯ ಮಧ್ಯೆ ದಿವಾಳಿತನ ತಡೆಯಲು ಶೀಘ್ರದಲ್ಲೇ ಒಪ್ಪಂದವೊಂದಕ್ಕೆ ಪೂರ್ಣವಾಗಲಿದೆ ಎಂದು ಪಾಕಿಸ್ತಾನದ ಹಣಕಾಸು ಕಾರ್ಯದರ್ಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಮಟ್ಟದ ಬಾಹ್ಯ ಸಾಲವನ್ನು ತೀರಿಸಲು ಪಾಕಿಸ್ತಾನವು ಪ್ರಯತ್ನಿಸುತ್ತಿದ್ದರೂ ಪಾವತಿಗಳ ಸಮತೋಲನ ಮಾಡಲಾಗುತ್ತಿಲ್ಲ. ಕಠಿಣ ಹಣಕಾಸು ಪರಿಸ್ಥಿತಿಗಳನ್ನು ನಿವಾರಿಸಲು ಐಎಂಎಫ್ ನಿಯೋಗವು ಕಳೆದ ವಾರ ಇಸ್ಲಾಮಾಬಾದ್‌ಗೆ ಬಂದಿಳಿದಿತ್ತು. ಆದರೆ, ಮಾತುಕತೆಯ ಕೊನೆಯ ದಿನವಾದ ಗುರುವಾರ ನಿರ್ಣಾಯಕ ಬೇಲ್ ಔಟ್ ನಿಧಿಗಳನ್ನು ಬಿಡುಗಡೆ ಮಾಡಲು ಸ್ಪಷ್ಟವಾದ ಒಪ್ಪಂದವನ್ನು ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹತ್ತು ದಿನಗಳ ಮಾತುಕತೆಯ ನಂತರ ಐಎಂಎಫ್ ನಿಯೋಗವು ಶುಕ್ರವಾರ ಪಾಕಿಸ್ತಾನದಿಂದ ಮರಳಿದೆ.
ಇದರ ನಡುವೆ ಶುಕ್ರವಾರ ಇಸ್ಲಾಮಾಬಾದ್‌ನಿಂದ ಹೊರಟಿರುವ ಐಎಂಎಫ್ ತಂಡ, 10 ದಿನಗಳ ಮಾತುಕತೆಯಲ್ಲಿ ಗಣನೀಯ ಪ್ರಗತಿ ಕಂಡಿದೆ. ಮುಂದಿನ ದಿನಗಳಲ್ಲಿ ವರ್ಚುವಲ್ ಮೂಲಕ ಚರ್ಚೆಗಳು ಮುಂದುವರಿಯುತ್ತವೆ ಎಂದು ಐಎಂಎಫ್ ಮಿಷನ್ ಮುಖ್ಯಸ್ಥ ನಾಥನ್ ಹೇಳಿಕೆ ನೀಡಿದ್ದಾರೆ. ಇದೀಗ ಐಎಂಎಫ್ನಿಂದ ತೆಗೆದುಕೊಂಡ 7 ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿಸಲು ಪಾಕಿಸ್ತಾನ ಸರ್ಕಾರವು ಈ ವಿದ್ಯುತ್ ಶುಲ್ಕ ಹೆಚ್ಚಳವನ್ನು ಘೋಷಿಸಿದೆ. ಇದರೊಂದಿಗೆ ದೇಶದ ದುಃಸ್ಥಿತಿಯನ್ನು ಸರಿಪಡಿಸಲು ಯಾವುದೇ ಮಾರ್ಗ ಇಲ್ಲ ಎಂದು ಪಾಕ್ ಒಪ್ಪಿಕೊಂಡಿದೆ.
ಇದನ್ನೂ ಓದಿ:ಐಎಂಎಫ್ನೊಂದಿಗೆ ಮಾತುಕತೆ ವಿಫಲ: ಹಣವಿಲ್ಲದ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ