ನವದೆಹಲಿ : ಭಾರತದ ವಿದೇಶ ವ್ಯಾಪಾರ ನೀತಿಯನ್ನು ಶ್ಲಾಘಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಭಾರತದ ಹಾಗೆ ಪಾಕಿಸ್ತಾನ ಕೂಡ ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾತೈಲವನ್ನು ಖರೀದಿಸಲು ಬಯಸಿತ್ತು ಎಂದು ಹೇಳಿದ್ದಾರೆ. ಆದರೆ ತಮ್ಮ ಸರ್ಕಾರವು ಅವಿಶ್ವಾಸ ಮತ ಯಾಚನೆಯಲ್ಲಿ ಅಧಿಕಾರ ಕಳೆದುಕೊಂಡ ಕಾರಣದಿಂದ ಹಾಗೆ ಮಾಡಲಾಗಲಿಲ್ಲ ಎಂದಿದ್ದಾರೆ. ವಿಡಿಯೋ ಸಂದೇಶದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಭಾರತದಂತೆಯೇ ರಷ್ಯಾದ ಕಚ್ಚಾ ತೈಲವನ್ನು ಪಡೆಯಲು ಬಯಸಿದ್ದೆವು, ಆದರೆ ಅದು ಸಾಧ್ಯವಾಗಲಿಲ್ಲ ಎಂದರು. ಉಕ್ರೇನ್ ಯುದ್ಧ ನಡೆಯುತ್ತಿರುವ ಮಧ್ಯೆಯೂ ಭಾರತದ ಹಾಗೆ ಪಾಕಿಸ್ತಾನವು ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸಬಹುದಾಗಿತ್ತು ಎಂದು ಅವರು ವಿಷಾದಿಸಿದರು.
ಪಾಶ್ಚಿಮಾತ್ಯ ರಾಷ್ಟ್ರಗಳ ತೀವ್ರ ವಿರೋಧದ ನಡುವೆಯೂ ಭಾರತವು ರಷ್ಯಾದಿಂದ ಅಗ್ಗದ ತೈಲ ಖರೀದಿಸುತ್ತಿರುವುದು ಹಾಗೂ ದೇಶ ಆರ್ಥಿಕವಾಗಿ ಬೆಳವಣಿಗೆ ಕಾಣುತ್ತಿರುವುದಕ್ಕೆ ಇಮ್ರಾನ್ ಖಾನ್ ಭಾರತವನ್ನು ಶ್ಲಾಘಿಸಿದ್ದು ಇದೇ ಮೊದಲ ಸಲವಲ್ಲ ಎಂಬುದು ಗಮನಾರ್ಹ. ಮೇ 2022 ರಲ್ಲಿ ಕೂಡ ಇಮ್ರಾನ್ ಖಾನ್, ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಶ್ಲಾಘಿಸಿದ್ದರು.
ಸರ್ಕಾರ ಹಾಗೂ ನ್ಯಾಯಾಂಗದ ಮಧ್ಯೆ ಬಿಕ್ಕಟ್ಟು: ಪಾಕಿಸ್ತಾನದ ಆರ್ಥಿಕ ಪ್ರಕ್ಷುಬ್ಧತೆ ಮತ್ತು ಭದ್ರತಾ ಪರಿಸ್ಥಿತಿಯನ್ನು ನೋಡಿದರೆ ಸದ್ಯದ ಸ್ಥಿತಿಯಲ್ಲಿ ಪ್ರಾಂತೀಯ ಕ್ಷಿಪ್ರ ಚುನಾವಣೆ ನಡೆಸುವುದು ಪಾಕಿಸ್ತಾನದ ರಾಷ್ಟ್ರೀಯ ಹಿತಾಸಕ್ತಿಯಲ್ಲಿಲ್ಲ ಎಂದು ಆ ದೇಶದ ಹಣಕಾಸು ಸಚಿವ ಇಶಾಕ್ ದಾರ್ ಸೋಮವಾರ ಹೇಳಿದ್ದಾರೆ. ಚುನಾವಣೆಗಳನ್ನು ನಡೆಸಲೇಬೇಕೆಂದು ಕಳೆದ ವಾರ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಸದ್ಯ ಸಚಿವ ಇಶಾಕ್ ದಾರ್ ಅವರ ಹೇಳಿಕೆ ನ್ಯಾಯಾಂಗದ ಆದೇಶವನ್ನು ಅಲ್ಲಗಳೆಯುವಂಥ ಹೇಳಿಕೆಯಾಗಿದೆ. ಇದರಿಂದ ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವ ಸಾಧ್ಯತೆಯಿದೆ. ಈಗಾಗಲೇ ಪಾಕಿಸ್ತಾನದಲ್ಲಿ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟು ತಾರಕಕ್ಕೇರಿದೆ.