ಇಸ್ಲಾಮಾಬಾದ್:ಸುಮಾರು 1.4 ಮಿಲಿಯನ್ ಅಫ್ಘಾನ್ ನಿರಾಶ್ರಿತರಿಗೆ ಕಾನೂನುಬದ್ಧ ನಿವಾಸ ಸ್ಥಾನಮಾನವನ್ನು ವರ್ಷದ ಅಂತ್ಯದವರೆಗೆ ವಿಸ್ತರಿಸುವುದಾಗಿ ಪಾಕಿಸ್ತಾನ ಶುಕ್ರವಾರ ಘೋಷಿಸಿದೆ. ನಾಲ್ಕು ತಿಂಗಳ ವಿಳಂಬದ ನಂತರ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ. ಆದಾಗ್ಯೂ, ದಾಖಲೆರಹಿತವಾಗಿ ವಾಸಿಸುತ್ತಿರುವ ಆಫ್ಘನ್ನರು ಮತ್ತು ಇತರ ವಿದೇಶಿ ಪ್ರಜೆಗಳ ಗಡಿಪಾರು ನಿಲ್ಲಿಸುವುದಿಲ್ಲ ಎಂದು ಪಾಕ್ ಸರ್ಕಾರ ಸ್ಪಷ್ಟ ಪಡಿಸಿದೆ.
ನೋಂದಾಯಿತ ಅಫ್ಘಾನ್ ನಿರಾಶ್ರಿತರಿಗೆ ನೀಡಲಾದ ನೋಂದಣಿ ಪುರಾವೆ ಅಥವಾ ಪಿಒಆರ್ ಕಾರ್ಡ್ಗಳ ಸಿಂಧುತ್ವವನ್ನು ಡಿಸೆಂಬರ್ 31, 2023 ರವರೆಗೆ ವಿಸ್ತರಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಪಾಕಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಸರ್ಕಾರದ ನಿರ್ಧಾರದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಕಿರುಕುಳದಿಂದ ತಪ್ಪಿಸಿಕೊಳ್ಳಲು 1970 ರ ದಶಕದ ಉತ್ತರಾರ್ಧದಿಂದ ಪಾಕಿಸ್ತಾನಕ್ಕೆ ವಲಸೆ ಬಂದಿರುವವರನ್ನು ನೋಂದಾಯಿತ ನಿರಾಶ್ರಿತರ ಪಟ್ಟಿಗೆ ಸೇರಿಸಲಾಗಿದೆ. ಇವರ ಪಿಒಆರ್ ಕಾರ್ಡ್ಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ನವೀಕರಿಸಲಾಗುತ್ತದೆ. ಆದಾಗ್ಯೂ, ಶುಕ್ರವಾರದ ಹೇಳಿಕೆಯ ಪ್ರಕಾರ ಜೂನ್ 30 ರಂದು ಈ ಕಾರ್ಡ್ಗಳ ಅವಧಿ ಮುಗಿದಾಗ ಯಾಕೆ ನವೀಕರಣ ಮಾಡಲಾಗಿಲ್ಲ ಎಂಬ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿಲ್ಲ.