ಕರಾಚಿ (ಪಾಕಿಸ್ತಾನ): ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ವಿವಾಹ ಮಾಡುವ ದುರುದ್ದೇಶದಿಂದ ಅಪಹರಣ ಮಾಡಿದ್ದ ಹಿಂದೂ ಬಾಲಕಿಯನ್ನು ಕರಾಚಿಯಲ್ಲಿ ವಶಕ್ಕೆ ಪಡೆದಿರುವುದಾಗಿ ಪಾಕ್ ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಘ್ಘಾನ್ ಪಶ್ತೂನ್ ಕುಟುಂಬದವರು ಬಾಲಕಿಯನ್ನು ಕಿಡ್ನಾಪ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.
ರವೀನಾ ಮೇಘವಾಲ್ ಎಂಬ ಬಾಲಕಿಯನ್ನು ದಕ್ಷಿಣ ಸಿಂಧ್ ಪ್ರಾಂತ್ಯದ ತಾಂಡೋ ಅಲ್ಲಾಯರ್‌ನ ಸಂಜಾರ್ ಚಾಂಗ್ ಪ್ರದೇಶದಿಂದ ಅಪಹರಿಸಿ, ಕರಾಚಿಗೆ ಕರೆದೊಯ್ಯಲಾಗಿತ್ತು ಎಂದು ತಂಡೋ ಅಲ್ಲ್ಯಾರ್ ಎಸ್‌ಎಸ್‌ಪಿ ಸೈಯದ್ ಸಲೀಮ್ ಶಾ ಮಾಹಿತಿ ನೀಡಿದ್ದಾರೆ.
"ಕಿಡ್ನಾಪ್ ಕೇಸ್ಗೆ ಸಂಬಂಧಿಸಿದಂತೆ ಬಾಲಕಿಯ ಕುಟುಂಬ ಮತ್ತು ಸಿಂಧ್ ಪ್ರಾಂತ್ಯದ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪಾಕಿಸ್ತಾನದ ದಹ್ರಾವರ್ ಇತ್ತೆಹಾದ್ (ಪಿಡಿಐ) ದೂರು ದಾಖಲಿಸಿದೆ. ದೂರು ನೀಡಿದ ಬಳಿಕ ತನಿಖೆ ನಡೆಸಿ, ನಾವು ಕರಾಚಿಗೆ ಪೊಲೀಸ್ ತಂಡವನ್ನು ಕಳುಹಿಸಿದೆವು, ಅಲ್ಲಿಂದ ಬಾಲಕಿಯನ್ನು ಸುರಕ್ಷಿತವಾಗಿ ಮಿರ್ಪುರ್ಖಾಸ್ಗೆ ಕರೆ ತರಲಾಯಿತು. ಅಫ್ಘಾನಿಸ್ತಾನದ ಪಶ್ತೂನ್ ಕುಟುಂಬವು ಬಾಲಕಿ ಇಸ್ಲಾಂಗೆ ಮತಾಂತರಗೊಂಡಿದ್ದು, ಅವಳ ಸ್ವಂತ ಇಚ್ಛೆಯಿಂದಲೇ ಜಮೋ ಖಾನ್ ಅವರನ್ನು ವಿವಾಹವಾದರು ಎಂದು ಹೇಳಿಕೊಂಡಿದೆ" ಎಂದು ಶಾ ಹೇಳಿದರು.
ಇದನ್ನೂ ಓದಿ :ವಿಟ್ಲ ಬಾಲಕಿ ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣ : ಇಬ್ಬರ ಬಂಧನ
ಕುತೂಹಲಕಾರಿ ವಿಷಯ ಅಂದ್ರೆ, ಶನಿವಾರ ಬಾಲಕಿ ಮತ್ತು ಆರೋಪಿಯನ್ನು ತಂಡೋ ಅಲ್ಲಾಯರ್‌ನಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಜಮೋ ಖಾನ್ ಮತ್ತು ಅವರ ಪರ ವಕೀಲರು ಮದುವೆ ಪ್ರಮಾಣಪತ್ರವನ್ನು ಹಾಜರುಪಡಿಸಿದರು. ಆದರೆ, ಆರೋಪಿಗೆ ರಾಷ್ಟ್ರೀಯ ಗುರುತಿನ ಚೀಟಿಯನ್ನು ಸಲ್ಲಿಸಲು ಕೇಳಿದಾಗ ಆತನ ಬಳಿ ಯಾವುದೇ ದಾಖಲಾತಿ ಇರಲಿಲ್ಲ.