ಕರ್ನಾಟಕ

karnataka

ETV Bharat / international

ಸರ್ಕಾರವನ್ನು ಉರುಳಿಸುವ ಷಡ್ಯಂತ್ರದಲ್ಲಿ ವಿದೇಶಿ ಶಕ್ತಿಗಳ ಕೈವಾಡ: ಪಾಕ್​ ಪ್ರಧಾನಿ ಇಮ್ರಾನ್ ಖಾನ್ - ಅಮ್ರ್ ಬಿಲ್ ಮಾರೂಫ್

ಸರ್ಕಾರವನ್ನು ಉರುಳಿಸಲು ಸ್ಥಳೀಯ ರಾಜಕಾರಣಿಗಳು ವಿದೇಶಗಳಿಂದ ಹಣ ಮತ್ತು ಬೆಂಬಲ ಪಡೆಯುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಗಳಿವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.

Pak PM Imran Khan claims foreign powers behind conspiracy' to overthrow his govt
ಸರ್ಕಾರವನ್ನು ಉರುಳಿಸುವ ಷಡ್ಯಂತ್ರದಲ್ಲಿ ವಿದೇಶಿ ಶಕ್ತಿಗಳ ಕೈವಾಡ: ಪಾಕ್​ ಪ್ರಧಾನಿ ಇಮ್ರಾನ್ ಖಾನ್

By

Published : Mar 28, 2022, 3:09 PM IST

ಇಸ್ಲಾಮಾಬಾದ್(ಪಾಕಿಸ್ತಾನ): ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕ್ಷಣಗಣನೆ​ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್​ನಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ, ಇಮ್ರಾನ್ ಖಾನ್ ಮಾತನಾಡಿದ್ದಾರೆ. ಅವಿಶ್ವಾಸ ನಿರ್ಣಯದ ಮೂಲಕ ಸರ್ಕಾರವನ್ನು ಪತನಗೊಳಿಸಲು ವಿದೇಶಿ ಶಕ್ತಿಗಳು ಈ ಷಡ್ಯಂತ್ರದಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿದ್ದಾರೆ.

ಇಸ್ಲಾಮಾಬಾದ್‌ನ ಪರೇಡ್ ಗ್ರೌಂಡ್‌ನಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಾರ್ಟಿ (ಪಿಟಿಐ) ಪಕ್ಷ ಅಮ್ರ್ ಬಿಲ್ ಮಾರೂಫ್ (ಒಳ್ಳೆಯದನ್ನು ಆಜ್ಞಾಪಿಸು) ಎಂಬ ಶೀರ್ಷಿಕೆಯ ಅಡಿಯಲ್ಲಿ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಸಮಾವೇಶದಲ್ಲಿ ಇಮ್ರಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದೇಶಿ ಶಕ್ತಿಗಳು ಸ್ಥಳೀಯ ರಾಜಕಾರಣಿಗಳನ್ನು ಬಳಸಿಕೊಳ್ಳುತ್ತಿವೆ. ಸ್ಥಳೀಯ ರಾಜಕಾರಣಿಗಳು ವಿದೇಶಗಳಿಂದ ಹಣ ಮತ್ತು ಬೆಂಬಲ ಪಡೆಯುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಗಳಿವೆ ಎಂದು ಇಮ್ರಾನ್ ಖಾನ್ ದೂರಿದ್ದಾರೆ.

ಪಾಕಿಸ್ತಾನದಲ್ಲಿ ಸರ್ಕಾರವನ್ನು ಬದಲಾಯಿಸಲು ವಿದೇಶಿ ಹಣದ ಮೂಲಕ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲವರು ನಮ್ಮ ವಿರುದ್ಧ ಹಣವನ್ನು ಬಳಸುತ್ತಿದ್ದಾರೆ. ನಮ್ಮ ಮೇಲೆ ಒತ್ತಡ ಹೇರಲು ಯಾವ ಯಾವ ಸ್ಥಳಗಳಿಂದ ಪ್ರಯತ್ನಗಳು ನಡೆಯುತ್ತಿವೆ ಎಂಬುದು ನಮಗೆ ತಿಳಿದಿದೆ. ನಮಗೆ ಬೆದರಿಕೆ ಹಾಕಲಾಗಿದೆ. ನಾವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇಮ್ರಾನ್ ಖಾನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ವಿದೇಶಿ ಷಡ್ಯಂತ್ರದ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಒಂದೂವರೆ ಗಂಟೆ ಭಾಷಣ ಮಾಡಿದ ಇಮ್ರಾನ್ ಖಾನ್​, ದೇಶದ ಪ್ರತಿಯೊಂದು ಭಾಗದಿಂದ ಸಮಾವೇಶಕ್ಕೆ ಬಂದವರಿಗೆ ಮೊದಲು ಧನ್ಯವಾದ ಅರ್ಪಿಸಿದರು. ಸರ್ಕಾರಿ ಕೆಲಸಗಳಲ್ಲಿ ಇದ್ದುಕೊಂಡು ಅಪರಾಧಗಳಲ್ಲಿ ಭಾಗಿಯಾಗಿರುವ ಶ್ರೀಮಂತರನ್ನು ಹಿಡಿಯಲು ಅಲ್ಲಿನ ಕಾನೂನು ವಿಫಲವಾಗಿರುವುದರಿಂದ ಬಡ ದೇಶಗಳು ಹಿಂದುಳಿದಿವೆ. ಅವರು ಕದ್ದ ಮತ್ತು ಲೂಟಿ ಮಾಡಿದ ಹಣವನ್ನು ಬೇರೆ ದೇಶಗಳಲ್ಲಿರುವ ಖಾತೆಗಳಿಗೆ ವರ್ಗಾಯಿಸುತ್ತಾರೆ. ದೊಡ್ಡ ಕಳ್ಳರು ದೇಶವನ್ನು ನಾಶ ಮಾಡುತ್ತಾರೆ. ಸಣ್ಣ ಕಳ್ಳರು ದೇಶವನ್ನು ನಾಶ ಮಾಡುವುದಿಲ್ಲ ಎಂದು ಇಮ್ರಾನ್ ಅಭಿಪ್ರಾಯಪಟ್ಟಿದ್ದಾರೆ.

ಮೂವರು ಗೂಂಡಾಗಳು ವರ್ಷಗಟ್ಟಲೆ ದೇಶವನ್ನು ಲೂಟಿ ಮಾಡಿದ್ದಾರೆ ಎಂದ ಅವರು ಜನರಲ್ ಮುಷರಫ್ ತಮ್ಮ ಸರ್ಕಾರವನ್ನು ಉಳಿಸಲು ಪ್ರಯತ್ನಿಸಿ, ಕಳ್ಳರಿಗೆ ರಾಷ್ಟ್ರೀಯ ಸಮನ್ವಯ ಸುಗ್ರೀವಾಜ್ಞೆ (NRO) ನೀಡಿದರು. ಇದು ಪಾಕಿಸ್ತಾನದ ನಾಶಕ್ಕೆ ಕಾರಣವಾಯಿತು ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ. ಏನೇ ಆಗಲಿ, ನನ್ನ ಸರ್ಕಾರ ಹೋದರೂ ಅಥವಾ ನಾನು ನನ್ನ ಪ್ರಾಣವನ್ನು ಕಳೆದುಕೊಂಡರೂ ನಾನು ಅವರನ್ನು ಕ್ಷಮಿಸುವುದಿಲ್ಲ ಎಂದು ಇಮ್ರಾನ್ ಗುಡುಗಿದ್ದಾರೆ.

ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ನವಾಜ್ ಷರೀಫ್, ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕ ಮತ್ತು ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಜಮಿಯತ್ ಉಲೇಮಾ-ಎ-ಇಸ್ಲಾಂ (ಜೆಯುಐ) ನಾಯಕ ಫಜ್ಲುರ್ ರೆಹಮಾನ್ ಅವರ ವಿರುದ್ಧ ಪರೋಕ್ಷವಾಗಿ ಇಮ್ರಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವಿಶ್ವಾಸ ನಿರ್ಣಯದಲ್ಲಿ ತಮ್ಮ ವಿರುದ್ಧ ಮತ ಚಲಾಯಿಸದಂತೆ ತಮ್ಮ ಪಕ್ಷದ ಪ್ರತಿನಿಧಿಗಳಿಗೆ ಇಮ್ರಾನ್ ಖಾನ್ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ರಷ್ಯಾ - ಉಕ್ರೇನ್​​ ಯುದ್ಧ: ಟರ್ಕಿಯಲ್ಲಿ ಮುಂದಿನ ಸುತ್ತಿನ ಶಾಂತಿ ಮಾತುಕತೆ

ABOUT THE AUTHOR

...view details