ಇಸ್ಲಾಮಾಬಾದ್:ಹತ್ಯೆ ಮಾಡಲು ಯತ್ನಿಸಿ ಗುಂಡು ಹಾರಿಸಲಾದ ಜಾಗದಿಂದಲೇ ಯಾತ್ರೆಯನ್ನು ಮರು ಆರಂಭಿಸಲು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಜ್ಜಾಗಿದ್ದಾರೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಇಮ್ರಾನ್ ಮಂಗಳವಾರದಿಂದ ಯಾತ್ರೆಗೆ ಮರು ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ.
ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಇಮ್ರಾನ್ ಖಾನ್ ಲಾಹೋರ್ನಿಂದ ಇಸ್ಲಾಮಾಬಾದ್ಗೆ ಯಾತ್ರೆ ಆರಂಭಿಸಿದ್ದಾರೆ. ಪಾಕಿಸ್ತಾನದ ಪಂಜಾಬ್ನ ವಜೀರಾಬಾದ್ನಲ್ಲಿ ರ‍್ಯಾಲಿ ಸಾಗುತ್ತಿದ್ದಾಗ 2 ದಿನಗಳ ಹಿಂದೆ ದುಷ್ಕರ್ಮಿಯೊಬ್ಬ ಇಮ್ರಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದ. ಇದರಿಂದ 4 ಗುಂಡುಗಳು ಇಮ್ರಾನ್ ಕಾಲು ಹೊಕ್ಕು, ಆಪ್ತ ಸಹಾಯಕ ಕೂಡ ಗಾಯಗೊಂಡಿದ್ದ. ಅಲ್ಲದೇ, ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಗಾಯಗೊಂಡಿರುವ ಇಮ್ರಾನ್ ಖಾನ್ ನನ್ನ ಹತ್ಯೆಗೆ ಸರ್ಕಾರವೇ ರೂಪಿಸಿದ ಸಂಚಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಮಂಗಳವಾರದಿಂದ ರ‍್ಯಾಲಿ ಪುನಾರಂಭ:ಇನ್ನು ದಾಳಿ ನಡೆದ ವಜೀರಾಬಾದ್ನಿಂದಲೇ ಯಾತ್ರೆಯನ್ನು ಮಂಗಳವಾರದಿಂದ ಪುನಾರಂಭಿಸಲಾಗುವುದು. ಮುಂದಿನ 10ರಿಂದ 14 ದಿನಗಳಲ್ಲಿ ನಮ್ಮ ಯಾತ್ರೆಯು ವೇಗ ಪಡೆದು ರಾವಲ್ಪಿಂಡಿ ತಲುಪಲಿದೆ ಎಂಬ ಇಮ್ರಾನ್ ಖಾನ್ ಹೇಳಿಕೆಯನ್ನು ಪಕ್ಷ ಟ್ವಿಟರ್ನಲ್ಲಿ ಹಂಚಿಕೊಂಡಿದೆ.