ಪೇಶಾವರ: ಪಾಕಿಸ್ತಾನ್ ತೆಹ್ರೀಕ್-ಇ ಪಕ್ಷ ಇತ್ತೀಚೆಗೆ ಆಯೋಜಿಸಿದ್ದ ಆಜಾದಿ ಮೆರವಣಿಗೆ ವೇಳೆ ಇಮ್ರಾನ್ ಖಾನ್ ಅವರ ಬೆಂಬಲಿಗರು ಬೆಂಕಿ ಹಚ್ಚಿ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಖಾನ್ ವಿರುದ್ಧ ದಾಖಲಾಗಿರುವ 14 ಪ್ರಕರಣಗಳಲ್ಲಿ ಪಾಕಿಸ್ತಾನದ ನ್ಯಾಯಾಲಯವೊಂದು ಮೂರು ವಾರಗಳ ಕಾಲ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಮಾಧ್ಯಮ ವರದಿಗಳ ಪ್ರಕಾರ 50,000 ರೂಪಾಯಿಗಳ ಶ್ಯೂರಿಟಿಯ ಜೊತೆಗೆ 69 ವರ್ಷದ ಮಾಜಿ ಪ್ರಧಾನಿ ಖಾನ್‌ಗೆ ಪೇಶಾವರ ಹೈಕೋರ್ಟ್ ಜಾಮೀನು ನೀಡಿದೆ ಎಂದು ಹೇಳಲಾಗಿದೆ. ಬಂಧನದ ಭಯದಿಂದ ಖಾನ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಪಿಎಚ್‌ಸಿ ಮುಖ್ಯ ನ್ಯಾಯಮೂರ್ತಿ ಖೈಸರ್ ರಶೀದ್ ಇವರ ಮನವಿ ಸ್ವೀಕರಿಸಿದ್ದರು ಹಾಗೆ ಖಾನ್ ಖುದ್ದು ವಿಚಾರಣೆಗೆ ಹಾಜರಾಗಿದ್ದರು.
ವಕೀಲ ಬಾಬರ್ ಅವನ್ ಅವರು ತಮ್ಮ ಕಕ್ಷಿದಾರ ಖಾನ್ ಪರ ವಾದ ಮಾಡಿದ್ದಾರೆ ಹಾಗೂ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಇದನ್ನು ಆಲಿಸಿದ ನ್ಯಾಯಾಲಯ ಜೂನ್ 25 ರ ವರೆಗೆ ಜಾಮೀನು ನೀಡಿದ್ದು, ಜೂನ್ 25 ಕ್ಕೂ ಮೊದಲು ಇಸ್ಲಾಮಾಬಾದ್ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗುವಂತೆ ಖಾನ್ ಅವರಿಗೆ ಸೂಚಿಸಲಾಗಿದೆ.
ಖಾನ್ ಅವರನ್ನು ಅವಿಶ್ವಾಸ ಮತದ ಮೂಲಕ ಏಪ್ರಿಲ್‌ನಲ್ಲಿ ಅಧಿಕಾರದಿಂದ ಕೆಳಗಿಳಿಸಲಾಗಿದೆ. ಆದರೆ, ಈ ಮಾರ್ಗವನ್ನು ಒಪ್ಪದ ಖಾನ್ ತಮ್ಮ ಸರ್ಕಾರ ಉರುಳಿಸುವಲ್ಲಿ ಯುಎಸ್ ಸಹ ಭಾಗಿಯಾಗಿದೆ ಎಂದು ಆರೋಪಿಸಿದ್ದಾರೆ. ಅಂದಿನಿಂದಲೂ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಹೊಸ ಚುನಾವಣೆಗಾಗಿ ಆಗ್ರಹ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಂತೂರ್ ಮಾಂತ್ರಿಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ಭಜನ್ ಸೊಪೋರಿ ನಿಧನ