ವಾಷಿಂಗ್ಟನ್ (ಅಮೆರಿಕ): ಕಳೆದ ಜನವರಿಯಲ್ಲಿ ಪೊಲೀಸ್ ಕಾರು ಡಿಕ್ಕಿ ಹೊಡೆದು ಮೃತಪಟ್ಟ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ (23) ಪ್ರಕರಣದ ಬಗ್ಗೆ ತ್ವರಿತ ತನಿಖೆ ನಡೆಸುವುದಾಗಿ ಅಮೆರಿಕ ಸರ್ಕಾರ ಹೇಳಿದೆ. ಜಾಹ್ನವಿ ಸಾವಿನ ಕುರಿತು ಅಂದು ಘಟನೆ ನಡೆದ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅಪಹಾಸ್ಯ ಮಾಡಿದ್ದ ವಿಡಿಯೋ ಇತ್ತೀಚೆಗೆ ಹೊರಬಿದ್ದಿತ್ತು. ಹೀಗಾಗಿ ಸಂಪೂರ್ಣ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕೆಂದು ಭಾರತ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಜೋ ಬೈಡನ್ ಸರ್ಕಾರವು ತನಿಖೆ ಹಾಗೂ ಕ್ರಮದ ಭರವಸೆ ನೀಡಿದೆ.
ಜನವರಿ 23ರಂದು ಆಂಧ್ರ ಪ್ರದೇಶದ ಕರ್ನೂಲ್ ಮೂಲದ ಜಾಹ್ನವಿ ಕಂದುಲಾ ಮೃತಪಟ್ಟಿದ್ದರು. ಸೌತ್ ಲೇಕ್ ಯೂನಿಯನ್‌ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ವಿದ್ಯಾರ್ಥಿನಿಯಾಗಿದ್ದ ಜಾಹ್ನವಿಗೆ ಸಿಯಾಟಲ್ ಪೊಲೀಸರ ಗಸ್ತು ತಿರುಗುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ಡೆಕ್ಸ್ಟರ್ ಅವೆನ್ಯೂ ನಾರ್ತ್ ಮತ್ತು ಥಾಮಸ್ ಸ್ಟ್ರೀಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಇತ್ತೀಚೆಗೆ ಈ ಘಟನೆಗೆ ಸಂಬಂಧಿಸಿದ ಬಾಡಿಕ್ಯಾಮ್ ದೃಶ್ಯಾವಳಿಗಳು ಬಹಿರಂಗವಾಗಿವೆ.
ಈ ಬಾಡಿಕ್ಯಾಮ್ನಲ್ಲಿ ಗಸ್ತು ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ಜಾಹ್ನವಿ ಬಗ್ಗೆ ಪೊಲೀಸ್ ಅಧಿಕಾರಿಗಳ ಗಿಲ್ಡ್ ಉಪಾಧ್ಯಕ್ಷ ಡೇನಿಯಲ್ ಆಡೆರರ್ ಫೋನ್ನಲ್ಲಿ ಸ್ವಲ್ಪವೂ ಕನಿಕರವಿಲ್ಲದೆ ನಗುತ್ತಲೇ ಮಾತನಾಡುತ್ತಾ ತಮಾಷೆ ಮಾಡುತ್ತಿರುವುದು ಕಂಡುಬಂದಿದೆ. ''ಅವಳು ಮೃತಪಟ್ಟಿದ್ದಾಳೆ. ಸೀಮಿತ ಮೌಲ್ಯ ಹೊಂದಿದ್ದಳು.. ಸಾಮಾನ್ಯದವಳು'' ಎಂದು ಪೊಲೀಸ್ ಅಧಿಕಾರಿ ಡೇನಿಯಲ್ ಹೇಳಿದ್ದು ಬಯಲಿಗೆ ಬಂದಿದೆ. ಹೀಗಾಗಿ ಭಾರತೀಯ ಸಮುದಾಯದಿಂದ ತೀವ್ರ ಖಂಡನೆ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ, ಈ ವಿಷಯದ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರನ್ಜೀತ್ ಸಿಂಗ್ ಸಂಧು ಬಲವಾಗಿ ಧ್ವನಿ ಎತ್ತಿದ್ದಾರೆ.
''ಜನವರಿಯಲ್ಲಿ ಸಿಯಾಟಲ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಜಾಹ್ನವಿ ಕಂದುಲಾ ಸಾವಿನ ನಿರ್ವಹಣೆಯ ಬಗ್ಗೆ ಮಾಧ್ಯಮಗಳು ಸೇರಿದಂತೆ ಇತ್ತೀಚಿನ ವರದಿಗಳು ತುಂಬಾ ಆತಂಕಕಾರಿಯಾಗಿವೆ. ಈ ದುರಂತ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಸಂಪೂರ್ಣ ತನಿಖೆ ಮತ್ತು ಕ್ರಮಕ್ಕಾಗಿ ನಾವು ಸಿಯಾಟಲ್ ಮತ್ತು ವಾಷಿಂಗ್ಟನ್ ಸ್ಥಳೀಯ ಅಧಿಕಾರಿಗಳು ಹಾಗೂ ವಾಷಿಂಗ್ಟನ್ ಡಿಸಿಯ ಹಿರಿಯ ಅಧಿಕಾರಿಗಳೊಂದಿಗೆ ವಿಷಯವನ್ನು ಬಲವಾಗಿ ತೆಗೆದುಕೊಂಡಿದ್ದೇವೆ'' ಎಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅಶೋಕ್ ಮಂಡುಲಾ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ (ಟ್ವಿಟ್ಟರ್) ಪೋಸ್ಟ್ ಮಾಡಿದ್ದಾರೆ.
ಮುಂದುವರೆದು, ''ಈ ಪ್ರಕರಣ ಕುರಿತು ಕಾನ್ಸುಲೇಟ್ ಮತ್ತು ರಾಯಭಾರ ಕಚೇರಿಯು ಎಲ್ಲ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಕಟವಾಗಿ ನಿಗಾ ವಹಿಸುವುದನ್ನು ಮುಂದುವರಿಸುತ್ತದೆ'' ಎಂದು ಕಾನ್ಸುಲೇಟ್ ಜನರಲ್ ತಿಳಿಸಿದ್ದಾರೆ. ಮತ್ತೊಂದಡೆ, ಭಾರತೀಯ ಮೂಲದ ಅಮೆರಿಕ ಕಾಂಗ್ರೆಸ್ಸಿಗ ರೋ ಖನ್ನಾ, ''ಮಾನವ ಜೀವನವು ಸೀಮಿತ ಮೌಲ್ಯ ಎಂದು ಭಾವಿಸುವ ಯಾರೇ ಆದರೂ ಕಾನೂನು ಜಾರಿ ಮಾಡುವ ಸೇವೆಯಲ್ಲಿ ಇರಬಾರದು'' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡುವ ಮೂಲಕ ಆರೋಪಿ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದರ ಬೆನ್ನಲ್ಲೇ ವಿದ್ಯಾರ್ಥಿನಿ ಜಾಹ್ನವಿ ಸಾವಿನ ಘಟನೆಯ ಕುರಿತು ತ್ವರಿತ ತನಿಖೆ ಮತ್ತು ಅದಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಕ್ರಮ ಜರುಗಿಸುವುದಾಗಿ ಅಮೆರಿಕ ಸರ್ಕಾರವು ಭಾರತ ಸರ್ಕಾರಕ್ಕೆ ಭರವಸೆ ನೀಡಿದೆ. ಇಡೀ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹಿರಿಯ ಆಡಳಿತ ಅಧಿಕಾರಿಗಳು ಭಾರತದ ರಾಯಭಾರಿ ಮತ್ತು ಭಾರತ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಆರೋಪಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಈ ಹಿಂದೆ ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ:ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು ಪ್ರಕರಣ: ಸಾವಿನ ನಂತರ ನಗುತ್ತಿದ್ದ ಪೊಲೀಸ್ ಅಧಿಕಾರಿಯ ವಿಡಿಯೋ ಬಹಿರಂಗ