ಟೆಹ್ರಾನ್ (ಇರಾನ್):ಅಕ್ಟೋಬರ್ 7ರಂದು ನಡೆದ ಭೀಕರ ಹಮಾಸ್ ದಾಳಿಯ ನಂತರ ಗಾಜಾ ವಿರುದ್ಧ ಪ್ರತೀಕಾರದ ಕ್ರಮಗಳನ್ನು ಮುಂದುವರೆಸಿರುವ ಇಸ್ರೇಲ್ ವಿರುದ್ಧ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ನ ಕ್ರಮಗಳು ಮಿತಿ ಮೀರಿದ್ದು, ಇಸ್ರೇಲ್ ವಿರುದ್ಧ ಕಾರ್ಯಾಚರಣೆ ನಡೆಸಲು ಇತರ ರಾಷ್ಟ್ರಗಳು ಮುಂದಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ಯಹೂದಿ ದೇಶದ ಅಪರಾಧಗಳು ಎಲ್ಲೆ ಮೀರಿವೆ. ಹೀಗಾಗಿ ಇತರ ರಾಷ್ಟ್ರಗಳು ಅದರ ವಿರುದ್ಧ ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾಗಬಹುದು. ನಮಗೆ ಸುಮ್ಮನಿರುವಂತೆ ಹೇಳುತ್ತಿರುವ ವಾಶಿಂಗ್ಟನ್ ಇಸ್ರೇಲ್ಗೆ ಬೆಂಬಲ ನೀಡುವುದನ್ನು ಮುಂದುವರಿಸಿದೆ" ಎಂದು ರೈಸಿ ಅಮೆರಿಕದ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.
ಸಿರಿಯಾ ಮತ್ತು ಇರಾಕ್ನಲ್ಲಿ ಯುಎಸ್ ಪಡೆಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳನ್ನು ಉಲ್ಲೇಖಿಸಿದ ಅವರು, "ಇಸ್ರೇಲ್ ವಿರುದ್ಧ ಹೋರಾಡುತ್ತಿರುವ ಗುಂಪುಗಳಿಗೆ ಅಮೆರಿಕ ಸಂದೇಶ ನೀಡಿತ್ತಾದರೂ, ಯುದ್ಧಭೂಮಿಯಲ್ಲಿ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಅದು ಪಡೆದಿದೆ" ಎಂದು ಅವರು ಅಮೆರಿಕಕ್ಕೂ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ.
ಶನಿವಾರ ರಾತ್ರಿ ಅಲ್-ಜಜೀರಾಗೆ ನೀಡಿದ ಸಂದರ್ಶನದಲ್ಲಿ ಕೂಡ ರೈಸಿ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಗಾಜಾ ಪ್ರವೇಶಿಸಿದ ಇಸ್ರೇಲ್ ಪಡೆಗಳಿಗೆ ಸೋಲುಂಟಾಗಿದೆ ಮತ್ತು ಅವರನ್ನು ಹಿಂದೆ ತಳ್ಳಲಾಗಿದೆ ಎಂದು ಅವರು ಹೇಳಿದ್ದರು. ಆದರೆ ಗಾಜಾ ಪಟ್ಟಿಯ ಸುತ್ತಮುತ್ತ ಹಲವಾರು ಘರ್ಷಣೆಗಳು ನಡೆದಿದ್ದರೂ ಇಸ್ರೇಲ್ ಪಡೆಗಳು ಶುಕ್ರವಾರ ತಲುಪಿದ ಸ್ಥಾನಗಳಿಂದ ಹಿಂದೆ ಸರಿದಿಲ್ಲ ಎಂದು ಜೆರುಸಲೇಮ್ ಪೋಸ್ಟ್ ವರದಿ ಮಾಡಿದೆ.
ಮಧ್ಯ ಪ್ರಾಚ್ಯದಲ್ಲಿರುವ ಇರಾನ್ ಬೆಂಬಲಿತ ಗುಂಪುಗಳು ಸ್ವತಂತ್ರವಾಗಿದ್ದು, ಅವುಗಳಿಗೆ ಇರಾನ್ ನಿರ್ದೇಶನ ನೀಡುವುದಿಲ್ಲ. ಇರಾನ್ಗೆ ಅಮೆರಿಕ ರವಾನಿಸಿದ ಸಂದೇಶಕ್ಕೆ ಪ್ರತಿಯಾಗಿ ಅವು ಸ್ವತಂತ್ರವಾಗಿ ಪ್ರತಿಕ್ರಿಯೆ ನೀಡಿವೆ ಎಂದು ರೈಸಿ ಪ್ರತಿಪಾದಿಸಿದ್ದಾರೆ.
ಇದಕ್ಕೂ ಮುನ್ನ ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ಇರಾನ್ ಹಮಾಸ್ಗೆ ಗುಪ್ತಚರ ಮಾಹಿತಿಯನ್ನು ಪೂರೈಸುವ ಮೂಲಕ ಸಹಾಯ ಮಾಡುತ್ತಿದೆ ಮತ್ತು ವಿಶ್ವಾದ್ಯಂತ ಇಸ್ರೇಲ್ ವಿರೋಧಿ ಪ್ರಚೋದನೆಯನ್ನು ಹೆಚ್ಚಿಸುತ್ತಿದೆ. ತರಬೇತಿ, ಶಸ್ತ್ರಾಸ್ತ್ರಗಳು, ಧನಸಹಾಯ ಮತ್ತು ತಾಂತ್ರಿಕ ಜ್ಞಾನದೊಂದಿಗೆ ಇರಾನ್ ಹಮಾಸ್ಗೆ ಸಹಾಯ ಮಾಡುತ್ತಿದೆ ಎಂದು ಹೇಳಿದರು. ಹಮಾಸ್ ವಿರುದ್ಧದ ಯುದ್ಧದ ಎರಡನೇ ಹಂತವು ಶುಕ್ರವಾರ ರಾತ್ರಿ ಗಾಜಾದೊಳಗೆ ನಮ್ಮ ಪಡೆಗಳು ಪ್ರವೇಶಿಸುವುದರೊಂದಿಗೆ ಪ್ರಾರಂಭವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ಹೇಳಿದ್ದಾರೆ.
ಇದನ್ನೂ ಓದಿ: ಗಾಜಾ ಕೆಳಗಿದೆ ಸುರಂಗ ಜಾಲ; ಇಸ್ರೇಲ್ಗೆ ಸವಾಲಾದ 'ಹಮಾಸ್ ಮೆಟ್ರೊ'