ಲಂಡನ್:ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಅವರಿಗೆ ಟೀಕೆಗಳು ಮತ್ತು ವಿವಾದಗಳು ಕಾಡುತ್ತಲೇ ಇವೆ. ಇತ್ತೀಚೆಗೆ ಅವರು ಮತ್ತೊಮ್ಮೆ ವಿವಾದದ ಸುಳಿಯಲ್ಲಿದ್ದಾರೆ. ರಿಷಿ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಹೊಸ ನೀತಿಯ ಬಗ್ಗೆ ಪ್ರತಿಪಕ್ಷಗಳು ಗದ್ದಲವೆಬ್ಬಿಸುತ್ತಿವೆ. ರಿಷಿ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ವ್ಯಾಪಾರ ಉದ್ದೇಶಕ್ಕಾಗಿ ಹೊಸ ನೀತಿ ತಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಮಾರ್ಚ್ ಆರಂಭದಲ್ಲಿ ಯುಕೆ ಸರ್ಕಾರವು ಸ್ಪ್ರಿಂಗ್ ಬಜೆಟ್ ಅನ್ನು ಪರಿಚಯಿಸಿತು. ಅದರಲ್ಲಿ ಚೈಲ್ಡ್ ಮೈಂಡರ್ಸ್ ಸೇವೆಗಳನ್ನು ಒದಗಿಸುವ ಕಂಪನಿಗಳಿಗೆ ಪ್ರೋತ್ಸಾಹ ನೀಡಲು ಹೊಸ ಪ್ರಾಯೋಗಿಕ ಯೋಜನೆಯನ್ನು ಘೋಷಿಸಲಾಯಿತು. ರಿಷಿ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಇದೇ ರೀತಿಯ ಸೇವೆಗಳನ್ನು ಒದಗಿಸುವ 'ಕೋರು ಕಿಡ್ಸ್ ಲಿಮಿಟೆಡ್' ಕಂಪನಿಯಲ್ಲಿ ಷೇರುದಾರರಾಗಿದ್ದಾರೆ. ಇದರೊಂದಿಗೆ ಪ್ರಧಾನಿ ತಮ್ಮ ಪತ್ನಿಯ ವ್ಯಾವಹಾರಿಕ ಹಿತಾಸಕ್ತಿಗಾಗಿ ಈ ಪ್ರಾಯೋಗಿಕ ಯೋಜನೆ ಜಾರಿಗೆ ತಂದಿದ್ದಾರೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.
ಪ್ರತಿಪಕ್ಷಗಳಿಂದ ರಿಷಿ ಸುನಕ್ ಮೇಲೆ ಟೀಕಾಸ್ತ್ರ ಪ್ರಯೋಗ ಈ ಯೋಜನೆಯನ್ನು ತರುವುದರ ಹಿಂದೆ ಏನಾದರೂ ವಿಶೇಷ ಆಸಕ್ತಿ ಇದೆಯೇ? ರಿಷಿ ಸುನಕ್ ಅವರ ಕುಟುಂಬವು ತಮ್ಮದೇ ಆದ ಸರ್ಕಾರಿ ನೀತಿಗಳಿಂದ ಹೆಚ್ಚುವರಿ ಆದಾಯವನ್ನು ಗಳಿಸಲು ಬಯಸುತ್ತದೆಯೇ? ಸುನಕ್ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ ಎಂದು ವಿರೋಧ ಪಕ್ಷದ ಲಿಬರಲ್ ಡೆಮಾಕ್ರಟ್ ಮುಖ್ಯ ಸಚೇತಕ ವೆಂಡಿ ಚೇಂಬರ್ಲೇನ್ ಪ್ರಶ್ನಿಸಿದ್ದಾರೆ. ಈ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಆದ್ರೆ ಈ ಆರೋಪಗಳನ್ನು 10 ಡೌನಿಂಗ್ ಸ್ಟ್ರೀಟ್ ನಿರಾಕರಿಸಿದೆ.
ರಿಷಿ ಸುನಕ್ ಪ್ರಧಾನಿಯಾಗುವ ಮುನ್ನವೇ ಅವರ ಪತ್ನಿಯ ತೆರಿಗೆ ವ್ಯವಹಾರಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದವು. ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರು ಬ್ರಿಟನ್‌ನ ಹೊರಗೆ ದುಡಿದ ಹಣಕ್ಕೆ ತೆರಿಗೆ ಪಾವತಿಸಿಲ್ಲ ಎಂದು ಅವರ ವಿರೋಧಿಗಳು ಆರೋಪಿಸಿದ್ದಾರೆ. ಇದು ಹೆಚ್ಚು ವಿವಾದಕ್ಕೀಡಾಗುತ್ತಿದ್ದಂತೆ ಅಕ್ಷತಾ ಪ್ರತಿಕ್ರಿಯಿಸಿ, ವಿಶ್ವದಾದ್ಯಂತ ಗಳಿಸುವ ಹಣಕ್ಕೂ ಯುಕೆಯಲ್ಲಿ ತೆರಿಗೆ ಪಾವತಿಸುವುದಾಗಿ ಆ ಸಮಯದಲ್ಲಿ ಘೋಷಿಸಿದರು.
ಓದಿ:ಉದ್ಯಾನವನದ ನಿಯಮ ಉಲ್ಲಂಘನೆ: ಮತ್ತೆ ವಿವಾದದಲ್ಲಿ ಸಿಲುಕಿದ ಬ್ರಿಟನ್ ಪ್ರಧಾನಿ ಸುನಕ್
ನಿಯಮ ಉಲ್ಲಂಘಿಸಿದ ಆರೋಪ:ಇತ್ತೀಚೆಗೆ ಸುನಕ್ ಅವರು ಮತ್ತೊಂದು ವಿವಾದಕ್ಕೆ ಸಿಲುಕಿದ್ದರು. ಪತ್ನಿ ಅಕ್ಷತಾ ಮೂರ್ತಿ ಹಾಗೂ ಇತರ ಕುಟುಂಬ ಸದಸ್ಯರೊಂದಿಗೆ ಉದ್ಯಾನವನಕ್ಕೆ ತೆರಳಿ ಅಲ್ಲಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಸುನಕ್ ಮೇಲೆ ಕೇಳಿ ಬಂದಿತು. ಲಂಡನ್‌ನ ಹೈಡ್ ಪಾರ್ಕ್‌ಗೆ ರಜೆಯ ಮೇಲೆ ಹೋಗಿದ್ದಾಗ ಸಾಕು ನಾಯಿ 'ನೋವಾ' ವನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ಸರ್ಪೆಂಟೈನ್ ಸರೋವರದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ನಾಯಿಯನ್ನು ಚೈನ್‌ನಿಂದ ಬಿಡುಗಡೆ ಮಾಡಿದ್ದರು. ಬ್ರಿಟನ್‌ನ ಉದ್ಯಾನಗಳಲ್ಲಿ ನಾಯಿಗಳನ್ನು ಬಿಡುವುದು ನಿಯಮಗಳಿಗೆ ವಿರುದ್ಧ. ಇದನ್ನು ಸ್ಪಷ್ಟವಾಗಿ ತಿಳಿಸುವ ಫಲಕವೂ ಅಲ್ಲಿತ್ತು. ಆದರೆ ಸುನಕ್ ಕುಟುಂಬ ಅದನ್ನು ಅನುಸರಿಸಲಿಲ್ಲ ಎಂಬ ಆರೋಪವಿದೆ. ಅಷ್ಟೇ ಅಲ್ಲ, ಪೊಲೀಸರು ತಕ್ಷಣ ಈ ವಿಚಾರವನ್ನು ಸುನಕ್ ಅವರ ಗಮನಕ್ಕೆ ತರಬೇಕಿತ್ತು. ಆದ್ರೆ ಅದು ವಿಳಂಬವಾಗಿದೆ. ಭದ್ರತಾ ಪಡೆಯ ಪೊಲೀಸ್ ಅಧಿಕಾರಿಯೊಬ್ಬರು ಉದ್ಯಾನದ ನಿಯಮಗಳನ್ನು ಗಮನಕ್ಕೆ ತಂದರು. ಕೂಡಲೇ ಸುನಕ್ ಕುಟುಂಬಸ್ಥರು ನಾಯಿಗೆ ಬೆಲ್ಟ್ ಹಾಕಿ ನಿಯಮ ಪಾಲಿಸಿದ್ದರು.