ನವದೆಹಲಿ: ಯುದ್ಧಪೀಡಿತ ಸುಡಾನ್‌ನಿಂದ ರಕ್ಷಿಸಲ್ಪಟ್ಟು ಸೌದಿ ಅರೇಬಿಯಾದಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸುಖವಿಂದರ್ ಸಿಂಗ್ ಎಂಬುವರು ನಿಟ್ಟುಸಿರು ಬಿಟ್ಟು, ಸುಡಾನ್ನಲ್ಲಿದ್ದಾಗ ನಾವು ಇನ್ನೇನು ಸತ್ತೇ ಹೋಗುತ್ತೇವೆ ಅನಿಸಿತ್ತು ಎಂದರು. ಸುಡಾನ್‌ನಿಂದ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ಕಾವೇರಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಥಮ ಹಂತದಲ್ಲಿ ರಕ್ಷಿಸಲ್ಪಟ್ಟ 360 ಭಾರತೀಯರ ಪೈಕಿ ಒಬ್ಬರಾಗಿದ್ದಾರೆ ಸುಖವಿಂದರ್ ಸಿಂಗ್. ಹರಿಯಾಣದ ಫರಿದಾಬಾದ್ ನಿವಾಸಿಯಾದ ಸುಖ್ವಿಂದರ್ ಅವರು ಸುಡಾನ್‌ನಲ್ಲಿನ ತಮ್ಮ ಅನುಭವವನ್ನು ನೆನಪಿಸಿಕೊಂಡು, ನಾನಿನ್ನೂ ಭೀತಿಯಲ್ಲಿಯೇ ಇದ್ದೇನೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಒಂದು ಪ್ರದೇಶದಲ್ಲಿ ಇದ್ದೆವು. ಅಲ್ಲಿ ಒಂದು ಕೋಣೆಗೆ ಸೀಮಿತವಾಗಿದ್ದೆವು. ನಾವು ಮರಣಶಯ್ಯೆಯಲ್ಲಿದ್ದೇವೆ ಎಂಬ ಪರಿಸ್ಥಿತಿ ಇತ್ತು ಎಂದರು. ಭಾರತವು ತನ್ನ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ ಹಿಂಸಾಚಾರ ಪೀಡಿತ ಸುಡಾನ್‌ನಿಂದ ಕನಿಷ್ಠ 670 ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಇಲ್ಲಿಗೆ ತಲುಪಿದ ಮತ್ತೋರ್ವ ಭಾರತೀಯ ಉತ್ತರ ಪ್ರದೇಶದ ಕುಶಿನಗರದ ಕಾರ್ಮಿಕ ಛೋಟು, ನಾನು ಸತ್ತು ವಾಪಸ್ ಬಂದಿದ್ದೇನೆ ಎಂದು ಜೋರಾಗಿ ಕೂಗಿದ. ಇನ್ನು ಎಂದಿಗೂ ನಾನು ಎಂದಿಗೂ ಸುಡಾನ್‌ಗೆ ಹಿಂತಿರುಗುವುದಿಲ್ಲ. ನನ್ನ ದೇಶದಲ್ಲಿ ನಾನು ಏನು ಬೇಕಾದರೂ ಮಾಡುತ್ತೇನೆ. ಆದರೆ ಅಲ್ಲಿಗೆ ಹೋಗುವುದಿಲ್ಲ ಎಂದಿದ್ದಾನೆ.
ಸುಡಾನ್‌ನಿಂದ ಮರಳಿದವರ ಫೋಟೋ ಹಂಚಿಕೊಂಡ ವಿದೇಶಾಂಗ ಸಚಿವರು:ವಿದೇಶಾಂಗ ಸಚಿವ ಎಸ್ ಜೈಶಂಕರ್ ಸುಡಾನ್‌ನಿಂದ ಮರಳಿದ ಭಾರತೀಯರ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಭಾರತವು ತನ್ನ ಜನರನ್ನು ಸ್ವಾಗತಿಸುತ್ತದೆ. ಆಪರೇಷನ್ ಕಾವೇರಿ ಅಡಿಯಲ್ಲಿ ಮೊದಲ ವಿಮಾನವು ನವದೆಹಲಿಯನ್ನು ತಲುಪಿದೆ ಮತ್ತು 360 ಭಾರತೀಯ ನಾಗರಿಕರು ತಾಯ್ನಾಡಿಗೆ ಮರಳಿದ್ದಾರೆ ಎಂದು ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ. ಸುಡಾನ್‌ನಿಂದ ಬಂದ ಮತ್ತೋರ್ವ ಭಾರತೀಯ ಪಂಜಾಬ್‌ನ ಹೋಶಿಯಾರ್‌ಪುರ ನಿವಾಸಿ ತಸ್ಮರ್ ಸಿಂಗ್ (60) ತಮ್ಮಭಯಾನಕ ಅನುಭವ ಹಂಚಿಕೊಂಡರು. ನಾವು ಅಲ್ಲಿ ಒಂದು ಜೀವಂತ ಶವದ ರೀತಿಯಲ್ಲಿ ಇದ್ದೆವು. ಚಿಕ್ಕ ಕೋಣೆಯೊಂದರಲ್ಲಿ ಕರೆಂಟ್ ಇರಲಿಲ್ಲ, ನೀರೂ ಇರಲಿಲ್ಲ. ಜೀವನದಲ್ಲಿ ಇಂಥ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಆದರೆ ದೇವರ ದಯೆಯಿಂದ ನಾವು ಜೀವಂತವಾಗಿದ್ದೇವೆ ಎಂದರು ತಸ್ಮರ್ ಸಿಂಗ್.