ನ್ಯೂಯಾರ್ಕ್ (ಅಮೆರಿಕ) :ಮಾರಣಾಂತಿಕ ಹಲ್ಲೆಗೊಳಗಾಗಿ ಬದುಕುಳಿದ 9 ತಿಂಗಳ ನಂತರ ಬೂಕರ್ ಪ್ರಶಸ್ತಿ ವಿಜೇತ ಲೇಖಕ ಸಲ್ಮಾನ್ ರಶ್ದಿ ನ್ಯೂಯಾರ್ಕ್ ನಗರದಲ್ಲಿ ನಡೆದ PEN ಅಮೆರಿಕ ವಾರ್ಷಿಕ ಗಾಲಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಗುರುವಾರ ರಾತ್ರಿ ಮ್ಯಾನ್ಹ್ಯಾಟನ್ನಲ್ಲಿರುವ ಅಮೇರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ 2023 ರ ಸಾಹಿತ್ಯ ಸಮ್ಮೇಳನದಲ್ಲಿ ಅವರು ಕಾಣಿಸಿಕೊಂಡಿದ್ದು ಬಹುತೇಕರಿಗೆ ಆಶ್ಚರ್ಯ ಮೂಡಿಸಿತು. ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. PEN ಅಮೇರಿಕಾ ಸಂಘಟನೆಯು ಭಾರತ ಮೂಲದ ಲೇಖಕ ರಶ್ದಿ ಅವರಿಗೆ PEN ಶತಮಾನೋತ್ಸವದ ಧೈರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
"ಒಂಬತ್ತು ತಿಂಗಳ ಹಿಂದೆ ಚೂರಿಯಿಂದ ಮಾಡಲಾದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಶ್ದಿ ಅವರು ವೈಯಕ್ತಿಕವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು" ಎಂದು ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿರುವ PEN ಅಮೇರಿಕಾ ಹೇಳಿದೆ. ಇದು ಅಮೆರಿಕ ಮತ್ತು ವಿಶ್ವಾದ್ಯಂತ ಸಾಹಿತ್ಯದ ಪ್ರಗತಿಯ ಮೂಲಕ ಮುಕ್ತ ಅಭಿವ್ಯಕ್ತಿ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ.
75 ವರ್ಷದ ರಶ್ದಿ ವೇದಿಕೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆಯೇ ನೆರೆದ ಸಾಹಿತ್ಯಾಭಿಮಾನಿಗಳು ಶಿಳ್ಳೆ ಹಾಗೂ ಚಪ್ಪಾಳೆಗಳ ಮೂಲಕ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಧನ್ಯವಾದಗಳು. ನಾನು ಮತ್ತೆ ಹೀಗೆ ಕಾಣಿಸಿಕೊಳ್ಳದೆ ಇರಬಹುದಿತ್ತು. ಆದೂ ಸಹ ಒಂದು ಆಯ್ಕೆಯಾಗಿತ್ತು. ಆದರೂ ನಿಮ್ಮ ಮುಂದೆ ಬಂದಿದ್ದೇನೆ. ಇಂಥದೊಂದು ಸಂದರ್ಭ ಎದುರಾಗಿರುವುದಕ್ಕೆ ನಾನು ಖುಷಿಯಾಗಿದ್ದೇನೆ. ಮತ್ತೆ ಬಹಿರಂಗವಾಗಿ ಕಾಣಿಸಿಕೊಳ್ಳಲು ಇದಕ್ಕಿಂತ ಉತ್ತಮವಾದ ಸಂದರ್ಭ ಮತ್ತೊಂದಿಲ್ಲ ಎಂದು ಭಾವಿಸುತ್ತೇನೆ. ಪುಸ್ತಕಗಳ ಜಗತ್ತಿನಲ್ಲಿರುವುದು ಹಾಗೂ ಸೆನ್ಸರ್ಶಿಪ್ ವಿರುದ್ಧ ಮತ್ತು ಮಾನವ ಹಕ್ಕುಗಳ ಪರವಾಗಿ ಹೋರಾಡುವ ಸಂದರ್ಭ ಇದಾಗಿದೆ ಎಂದು ಹೇಳಿದರು.