ಟೆಲ್ ಅವಿವ್ (ಇಸ್ರೇಲ್) :ಇಸ್ರೇಲ್ ಸೇನೆಯ ದಾಳಿಗೆ ಹೆಚ್ಚೂ ಕಡಿಮೆ ಇಡೀ ಗಾಜಾ ಪಟ್ಟಿ ಧ್ವಂಸವಾಗಿದೆ. ರಾಕೆಟ್, ಬಾಂಬ್ಗಳ ಸ್ಫೋಟದಲ್ಲಿ ಪ್ರತಿ 10 ನಿಮಿಷಕ್ಕೆ ಓರ್ವ ಮಗು ಸಾವನ್ನಪ್ಪಿದರೆ, ಇಬ್ಬರು ಗಾಯಗೊಳ್ಳುತ್ತಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯದ ತುರ್ತು ವೈದ್ಯಕೀಯ ಕೇಂದ್ರವು ಹೇಳಿಕೊಂಡಿದೆ.
ಇಸ್ರೇಲ್ ಗಾಜಾ ಮೇಲೆ ದಾಳಿ ಆರಂಭಿಸಿದಾಗಿನಿಂದ 3,900 ಮಕ್ಕಳು ಸಾವನ್ನಪ್ಪಿದ್ದಾರೆ. 8,067 ಮಕ್ಕಳು ಗಾಯಗೊಂಡಿದ್ದಾರೆ. 1,250 ಮಕ್ಕಳು ನಾಪತ್ತೆಯಾಗಿದ್ದಾರೆ. ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಸಾವನ್ನಪ್ಪಿದವರ ಪೈಕಿ ಶೇಕಡಾ 70 ರಷ್ಟು ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಇದ್ದಾರೆ ಎಂದು ತುರ್ತು ಕೇಂದ್ರದ ನಿರ್ದೇಶಕ ಮೊಟಾಸೆಮ್ ಸಲಾ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ನಡೆಸಿದ ದಾಳಿ ಬಳಿಕ, ನಿರಂತರವಾಗಿ ಗಾಜಾ ಪಟ್ಟಿಯ ಮೇಲೆ ಬಾಂಬ್ ಸುರಿಸುತ್ತಿರುವ ಇಸ್ರೇಲ್ ಸೇನೆ 9 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೈನಿಯನ್ನರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆ, ಆಂಬ್ಯುಲೆನ್ಸ್ ಮೇಲೆ ದಾಳಿ ಖಂಡನೀಯ:ಆಸ್ಪತ್ರೆಗಳು, ಆಂಬ್ಯುಲೆನ್ಸ್, ನಿರಾಶ್ರಿತರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಯುತ್ತಿರುವುದು ಭಯಾನಕ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಪ್ಯಾಲೆಸ್ಟೈನ್‌ನಲ್ಲಿ ಸುಮಾರು 5 ಸಾವಿರ ಮಕ್ಕಳು ಬಲಿಯಾಗಿದ್ದಾರೆ. ಸಾವಿರಾರು ಜನರ ಹತ್ಯಾಕಾಂಡಕ್ಕೆ ಕಾರಣವಾಗಿರುವ ಯುದ್ಧವನ್ನು ತಕ್ಷಣವೇ ತಡೆಯಬೇಕಿದೆ. ವಿಶ್ವದ ಖ್ಯಾತ ನಾಯಕರು ಗಾಜಾದಲ್ಲಿ ನಡೆಯುತ್ತಿರುವ 'ಹತ್ಯಾಕಾಂಡ'ಕ್ಕೆ ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂದು ಕಟುವಾದ ಮಾತುಗಳಲ್ಲಿ ಟೀಕಿಸಿದ್ದಾರೆ.
ಪ್ರಿಯಾಂಕಾ ಟ್ವೀಟ್ ಹೀಗಿದೆ:'ಸುಮಾರು 10,000 ನಾಗರಿಕರು ಯುದ್ಧದಲ್ಲಿ ಬಲಿಯಾಗಿದ್ದಾರೆ. ಅದರಲ್ಲಿ ಸುಮಾರು 5000 ಮಕ್ಕಳ ಹತ್ಯಾಕಾಂಡವಾಗಿದೆ. ಅದೆಷ್ಟೋ ಕುಟುಂಬಗಳು ನಾಶವಾಗಿವೆ. ಆಸ್ಪತ್ರೆಗಳು, ಆಂಬ್ಯುಲೆನ್ಸ್‌ಗಳು, ನಿರಾಶ್ರಿತರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ಮಾಡಲಾಗುತ್ತಿದೆ. ವಿಶ್ವ ನಾಯಕರು ಎಂದು ಕರೆಯಿಸಿಕೊಳ್ಳುವವರು ತಕ್ಷಣವೇ ಕದನ ವಿರಾಮಕ್ಕೆ ಒತ್ತಾಯಿಸಬೇಕು. ಇಲ್ಲವಾದಲ್ಲಿ ಮುಂದೆ ಅವರು ಈ ಬಗ್ಗೆ ಮಾತನಾಡುವ ನೈತಿಕ ಅಧಿಕಾರವನ್ನೇ ಕಳೆದುಕೊಳ್ಳಲಿದ್ದಾರೆ. ಗಾಜಾದ ಮೇಲಿನ ದಾಳಿಯು ಭಯಾನಕ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಹಮಾಸ್ ಉಗ್ರಗಾಮಿ ಗುಂಪಿನೊಂದಿಗೆ ಇಸ್ರೇಲ್ ನಡೆಸುತ್ತಿರುವ ಯುದ್ಧವು 30ನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧವಿಮಾನಗಳು ಗಾಜಾದ ಮೇಲೆ ನಿರಂತರವಾಗಿ ರಾಕೆಟ್ ಸುರಿಮಳೆ ಸುರಿಸುತ್ತಿವೆ. ಈ ಮಧ್ಯೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಕದನವಿರಾಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಹಮಾಸ್ನ ಕೃತ್ಯ ಭಯಾನಕ, ಪ್ಯಾಲೆಸ್ಟೈನ್ ಮೇಲಿನ ದಾಳಿ ಖಂಡನೀಯ: ಬರಾಕ್ ಒಬಾಮಾ