ಕೇಪ್ ಕೆನವೆರಲ್ (ಫ್ಲೋರಿಡಾ):38 ವರ್ಷದ ನಿವೃತ್ತ ನಾಸಾ ಉಪಗ್ರಹವೊಂದು ಆಕಾಶದಿಂದ ಬೀಳಲಿದೆ. ಅವಶೇಷಗಳು ಯಾರ ಮೇಲೂ ಬೀಳುವ ಸಾಧ್ಯತೆ ತುಂಬಾ ಕಡಿಮೆ ಎಂದು ನಾಸಾ ಶುಕ್ರವಾರ ಹೇಳಿದೆ. ನಾಸಾದ ಪ್ರಕಾರ, 5,400-ಪೌಂಡ್ (2,450-ಕಿಲೋಗ್ರಾಂ) ಉಪಗ್ರಹವು ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದ ನಂತರ ಸುಟ್ಟುಹೋಗುತ್ತದೆ. ಆದರೆ ಕೆಲವು ತುಣುಕುಗಳು ನೆಲಕ್ಕೆ ಅಪ್ಪಳಿಸಲೂ ಬಹುದು.
ರಕ್ಷಣಾ ಇಲಾಖೆಯ ಪ್ರಕಾರ ವಿಜ್ಞಾನ ಉಪಗ್ರಹವು ಭಾನುವಾರ ರಾತ್ರಿ ಕೆಳಗಿಳಿಯುವ ನಿರೀಕ್ಷೆಯಿದೆ. ಈ ಪ್ರಕ್ರಿಯೆಗೆ 17 ಗಂಟೆ ಕಾಲ ಸಮಯ ಹಿಡಿಯಬಹುದು ಎನ್ನಲಾಗ್ತಿದೆ. ಆದಾಗ್ಯೂ, ಕ್ಯಾಲಿಫೋರ್ನಿಯಾ ಮೂಲದ ಏರೋಸ್ಪೇಸ್ ಕಾರ್ಪೊರೇಷನ್, ಸೋಮವಾರ ಬೆಳಗ್ಗೆ ಭೂಮಿಗೆ ಬೀಳುವ ಗುರಿ ಹೊಂದಿದೆ.
ಇಆರ್ಬಿಎಸ್(ERBS) ಎಂದು ಕರೆಯಲ್ಪಡುವ ಭೂಮಿಯ ವಿಕಿರಣ ಬಜೆಟ್ ಉಪಗ್ರಹವನ್ನು 1984ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್‌ನಲ್ಲಿ ಉಡಾವಣೆ ಮಾಡಲಾಗಿತ್ತು. ಅದರ ನಿರೀಕ್ಷಿತ ಕೆಲಸದ ಜೀವಿತಾವಧಿಯು ಎರಡು ವರ್ಷಗಳಾಗಿದ್ದರೂ, ಉಪಗ್ರಹವು 2005ರಲ್ಲಿ ನಿವೃತ್ತಿಯಾಗುವವರೆಗೂ ಓಝೋನ್ ಮತ್ತು ಇತರ ವಾತಾವರಣದ ಮಾಪನಗಳನ್ನು ಮಾಡುತ್ತಲೇ ಇತ್ತು. ಭೂಮಿಯು ಸೂರ್ಯನಿಂದ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಹೊರಸೂಸುತ್ತದೆ ಎಂಬುದನ್ನು ಉಪಗ್ರಹವು ಅಧ್ಯಯನ ಮಾಡಿದೆ.
ಮಂಗಳದ ಅಧ್ಯಯನಕ್ಕೆ ನಾಸಾದ ಪ್ರಯತ್ನ:ಚಂದ್ರನ ನಿಗೂಢವನ್ನು ಪತ್ತೆ ಹಚ್ಚುವಲ್ಲಿ ನಾಸಾ ಸತತವಾಗಿ ಕಾರ್ಯಾಚರಣೆ ನಡೆಸುತ್ತಲೇ ಬಂದಿದೆ. 2023 ಮತ್ತು 24ರಲ್ಲಿ ಮಾನವರನ್ನು ಚಂದ್ರನ ಮೇಲ್ಮೈಗೆ ಕಳುಹಿಸುವ ಪ್ರಯತ್ನಗಳು ಮುಂದುವರೆದಿವೆ. ಓರಿಯನ್ ಬಾಹ್ಯಾಕಾಶ ನೌಕೆಯು ನವೆಂಬರ್ 28 ರಂದು ಆರ್ಟೆಮಿಸ್ ಒನ್ ಕಾರ್ಯಾಚರಣೆಯ ಸಮಯದಲ್ಲಿ ಭೂಮಿಯಿಂದ ಗರಿಷ್ಠ ದೂರವನ್ನು ತಲುಪಿದೆ. ಅದು ನಮ್ಮ ಗ್ರಹದಿಂದ 268,563 ಮೈಲುಗಳಷ್ಟು ದೂರದಲ್ಲಿದೆ.
ನಾಸಾದ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮಗಳ ಸಾಧನೆಗಳ ಸರಣಿಯಲ್ಲಿ ಸಂಸ್ಥೆ ತನ್ನ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ (SLS) ರಾಕೆಟ್ ಅನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ನಾಸಾದ ಓರಿಯನ್ ಬಾಹ್ಯಾಕಾಶ ನೌಕೆಯನ್ನು ಗಗನಯಾತ್ರಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬೂಸ್ಟರ್ ವಿಭಾಗದ ನಿರ್ಮಾಣವನ್ನು ಪೂರ್ಣಗೊಳಿಸಿದೆ.