ಲಂಡನ್(ಬ್ರಿಟನ್) : ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದಾಗಿ ತೈಲ ಮತ್ತು ಇತರ ಸರಕುಗಳ ಬೆಲೆಗಳು ಹೆಚ್ಚಾಗುವ ಅಪಾಯವಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಯೆಮೆನ್ ನ ಹೌತಿ ಬಂಡುಕೋರರು ಹಡಗುಗಳ ಮೇಲೆ ಸತತವಾಗಿ ದಾಳಿ ನಡೆಸುತ್ತಿರುವುದರಿಂದ ಹಲವಾರು ಶಿಪ್ಪಿಂಗ್ ಕಂಪನಿಗಳು ಈ ಮಾರ್ಗದ ಮೂಲಕ ಸಾಗಣೆಯನ್ನು ಸ್ಥಗಿತಗೊಳಿಸಿವೆ ಎಂದು ಬಿಬಿಸಿ ವರದಿ ಮಾಡಿದೆ. ವಿಶ್ವದ ಎರಡನೇ ಅತಿದೊಡ್ಡ ಹಡಗು ಸಾರಿಗೆ ಕಂಪನಿ ಮೆರ್ಸ್ಕ್ ಮಂಗಳವಾರ ತನ್ನ ಕೆಲವು ಹಡಗುಗಳನ್ನು ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಮೂಲಕ ಸಾಗಿಸುವುದಾಗಿ ಹೇಳಿದೆ.
ಕೆಂಪು ಸಮುದ್ರದಲ್ಲಿ ಹೌತಿಗಳ ದಾಳಿಯಿಂದ ಹಡಗುಗಳನ್ನು ರಕ್ಷಿಸಲು ಈಗ ಅಮೆರಿಕ ಸ್ವತಃ ಮುಂದಾಗಿದ್ದು, ಇದಕ್ಕಾಗಿ ಯುಕೆ, ಕೆನಡಾ, ಫ್ರಾನ್ಸ್, ಬಹ್ರೇನ್, ನಾರ್ವೆ ಮತ್ತು ಸ್ಪೇನ್ ದೇಶಗಳನ್ನೊಳಗೊಂಡ 'ಆಪರೇಷನ್ ಪ್ರಾಸ್ಪೆರಿಟಿ ಗಾರ್ಡಿಯನ್' ಹೆಸರಿನ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಏತನ್ಮಧ್ಯೆ, ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮಂಗಳವಾರ 40 ಕ್ಕೂ ಹೆಚ್ಚು ದೇಶಗಳ ಸಚಿವರೊಂದಿಗೆ ವರ್ಚುಯಲ್ ಸಭೆ ನಡೆಸಿ ಭದ್ರತಾ ಪ್ರಯತ್ನಗಳಲ್ಲಿ ಭಾಗಿಯಾಗುವಂತೆ ದೇಶಗಳಿಗೆ ಕರೆ ನೀಡಿದರು.