ಕಾಬೂಲ್:ತಾಲಿಬಾನ್‌ನ ಪ್ರಮುಖ ಪ್ರತಿಸ್ಪರ್ಧಿಯಾದ ಇಸ್ಲಾಮಿಕ್ ಸ್ಟೇಟ್ಸ್(ಐಎಸ್) ಸಂಘಟನೆಯು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮುಂದುವರಿಸಿದೆ. ಇದೇ ವೇಳೆ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ ಎಂದು ತಾಲಿಬಾನ್ ಸರ್ಕಾರ ತಿಳಿಸಿದೆ. ರಾಜಧಾನಿ ಕಾಬೂಲ್‌ನಲ್ಲಿ ಉಗ್ರ ಕೃತ್ಯಕ್ಕೆ ಮುಂದಾಗಿದ್ದ ಐಎಸ್ ಸಂಘಟನೆಯ ಉಗ್ರರನ್ನು ತಾಲಿಬಾನ್ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಿವೆ. ಇದೇ ವೇಳೆ ಶಸ್ತ್ರಾಸ್ತ್ರ, ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾಬೂಲ್‌ನಲ್ಲಿ ದಾಳಿಗೆ ಯೋಜನೆ ರೂಪಿಸಿದ್ದ ಐಸಿಸ್.. ರಾಜಧಾನಿ ಕಾಬೂಲ್‌ನಲ್ಲಿ ದಾಳಿಗಳನ್ನು ನಡೆಸಲು ಐಎಸ್ ಯೋಜನೆ ರೂಪಿಸಿತ್ತು. ಇದರ ವಿರುದ್ಧ ಕಾರ್ಯಾಚರಣೆ ನಡೆಸಿದ ತಾಲಿಬಾನ್ ಸರ್ಕಾರ, ಉಗ್ರರು ನೆಲೆಸಿದ್ದ ವಸತಿ ಪ್ರದೇಶದ ಮೇಲೆ ದಾಳಿ ನಡೆಸಿದೆ. ಖೇರ್ ಖಾನಾ ಪ್ರದೇಶದಲ್ಲಿ ಅಡಗಿದ್ದ ಭಯೋತ್ಪಾದಕರನ್ನು ತಾಲಿಬಾನ್ ಭದ್ರತಾ ಪಡೆಗಳು ಪತ್ತೆ ಮಾಡಿ ದಾಳಿ ನಡೆಸಿದೆ.
ದಾಳಿಯಲ್ಲಿ ಇಬ್ಬರು ಐಎಸ್ ಉಗ್ರರನ್ನು ಹತ್ಯೆ ಮಾಡಲಾಗಿದೆ ಮತ್ತು ಒಬ್ಬನನ್ನು ಜೀವಂತವಾಗಿ ಬಂಧಿಸಲಾಗಿದೆ. ಅಲ್ಲದೇ, ಸ್ಥಳದಲ್ಲಿ ಮದ್ದುಗುಂಡುಗಳು ಮತ್ತು ಮಿಲಿಟರಿ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ತಾಲಿಬಾನ್ ಪಡೆಗಳ ಯಾವುದೇ ಭದ್ರತಾ ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಘಟನೆಗೆ ಐಎಸ್‌ನಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.